ಕೊರೊನಾ ಹಾಟ್ ಸ್ಪಾಟ್ ಗಳಾಗುತ್ತಿವೆಯೇ ಕೊಡಗಿನ ಪ್ರವಾಸಿ ತಾಣಗಳು?
1 min readಕೊಡಗು,ಜ.18-ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಕೆಲವು ರೆಸಾರ್ಟ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದನ್ನು ಗಮನಿಸಿದರೆ ಪ್ರವಾಸೋದ್ಯಮದಿಂದಲೇ ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.
ಕೊಡಗು ಜಿಲ್ಲೆಯನ್ನು ವೀಕೆಂಡ್ ಕರ್ಫ್ಯೂವಿನಿಂದ ಹೊರಗಿಡುವಂತೆ ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟ ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಆದರೆ ಜಿಲ್ಲೆಯ ಕೆಲವು ರೆಸಾರ್ಟ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಮಡಿಕೇರಿ ನಗರದ ಹೊರವಲಯದ ಮೇಕೇರಿಯಲ್ಲಿರುವ ರೆಸಾರ್ಟ್ ಒಂದರಲ್ಲೇ ಸುಮಾರು 30ಕ್ಕೂ ಅಧಿಕ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಸೋಮವಾರಪೇಟೆ ಸಮೀಪದ ರೆಸಾರ್ಟ್ ಒಂದರ ಸಿಬ್ಬಂದಿಗಳಲ್ಲೂ ಕೋವಿಡ್ ಸೋಂಕು ಗೋಚರಿಸಿದೆ. ವೀಕೆಂಡ್ ಕರ್ಫ್ಯೂ ನಡುವೆಯೂ ಜಿಲ್ಲೆಗೆ ಪ್ರವಾಸಿಗರ ದಂಡು ಹರಿದು ಬರುತ್ತಿದ್ದು, ಇದು ಜಿಲ್ಲೆಯಲ್ಲಿ ಸೋಂಕು ಅಧಿಕವಾಗಲು ಕಾರಣವಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಬಳಿಕ ರೆಸಾರ್ಟ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ಹೆಚ್ಚಾಗಿ ಭಾದಿಸುತ್ತಿದೆ. ಆದರೂ ರೆಸಾರ್ಟ್ ಗಳನ್ನು ಮಾತ್ರ ಅಧಿಕಾರಿಗಳು ಸೀಲ್ಡೌನ್ ಮಾಡುತ್ತಿಲ್ಲ. ಹೋಂ ಸ್ಟೇ ರೆಸಾಟ್೯ಗಳಲ್ಲಿ ಕೋವಿಡ್ ಸೋಂಕು ಕಂಡು ಬಂದರೆ ಅವುಗಳನ್ನು ಸೀಲ್ ಡೌನ್ ಮಾಡುವಂತೆ ಶುಕ್ರವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದರು.
ಆದರೆ ಮಡಿಕೇರಿ ತಾಲೂಕಿನ ಮೇಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ನ 31 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರೂ, ರೆಸಾರ್ಟ್ ಸೀಲ್ಡೌನ್ ಆಗಿಲ್ಲ. ಬದಲಾಗಿ ಸೋಂಕು ದೃಢಪಟ್ಟಿರುವ ಸಿಬ್ಬಂದಿಯನ್ನು ಮಾತ್ರ ಪ್ರತ್ಯೇಕವಾಗಿರಿಸಿ ರೆಸಾರ್ಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಅವರು ರೆಸಾರ್ಟ್ ಸೀಲ್ಡೌನ್ ಮಾಡುವಂತೆ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಸ್ಥಳಕ್ಕೆ ತೆರಳಿದ ಮಡಿಕೇರಿ ತಹಸಿಲ್ದಾರ್ ಮಹೇಶ್, ಸೋಂಕಿತ ರೆಸಾರ್ಟ್ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿರುವ ಸ್ಥಳಕ್ಕಷ್ಟೇ ಹೋಗಿ ಪರಿಶೀಲನೆ ನಡೆಸಿ ವಾಪಾಸಾಗಿರುವುದು ಸಂಶಯಕ್ಕೆ ಎಡೆ ಮಾಡಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತಹಸಿಲ್ದಾರ್ ಮಹೇಶ್, ಕೋವಿಡ್ ಸೋಂಕಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ರೆಸಾರ್ಟ್ ಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಸೋಂಕಿತರನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು. ಬಳಿಕ ಅವರಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆಗಲೂ ಪಾಸಿಟಿವ್ ಬಂದರೆ ನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ಹೊಸ ವರ್ಷಾಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದ್ದರೂ, ಕೊಡಗಿನ ಬಹುತೇಕ ರೆಸಾರ್ಟ್ ಹಾಗೂ ಹೋಂಸ್ಟೇಗಳು ಸರಕಾರದ ಆದೇಶ ಹೊರಬೀಳುವ ಮುನ್ನವೇ ಭರ್ತಿಯಾಗಿದ್ದವು. ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಡೆಯದಿದ್ದರೂ ಬಹುತೇಕ ರೆಸಾರ್ಟ್ ಆವರಣಗಳಲ್ಲಿ ಹೊಸ ವರ್ಷವನ್ನು ಭರ್ಜರಿಯಾಗಿಯೇ ಬರಮಾಡಿಕೊಳ್ಳಲಾಗಿತ್ತು. ಅದೇ ಈಗ ರೆಸಾರ್ಟ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕಿಗೆ ಕಾರಣವಾಗಿದೆ ಎಂದೆನ್ನಬಹುದು.