ಮೈಸೂರಿನಲ್ಲಿ ಕೋವಿಡ್ 3ನೇ ಅಲೆ ಆತಂಕ: ಮಕ್ಕಳಲ್ಲಿ ಕೊರೊನಾ ನಿಯಂತ್ರಿಸಲು ಪಾಲಿಕೆಯಿಂದ ಕ್ರಮ
1 min readಮೈಸೂರು: ಮೈಸೂರಿನಲ್ಲಿ ಕೊರೊನಾ 3ನೇ ಅಲೆ ಆತಂಕ ಎದುರಾಗಿದ್ದು, ಮಕ್ಕಳ ಮೇಲೆ ಈ ಮೂರನೇ ಅಲೆ ಪರಿಣಾಮ ಬೀರಲಿದೆ. ಹೀಗಾಗಿ ಮಕ್ಕಳಲ್ಲಿ ಕೊರೊನಾ ನಿಯಂತ್ರಿಸಲು ಪಾಲಿಕೆ ಮುಂದಾಗಿದೆ.
ಮಕ್ಕಳಲ್ಲಿ ಕೊರೊನಾ ನಿಯಂತ್ರಿಸಲು ಮೈಸೂರಿನಲ್ಲಿ ಪೀಡಿಯಾಟ್ರಿಕ್ ಕೋವಿಡ್ ಕೇರ್ ಆರಂಭಿಸಲಾಗಿದ್ದು ಪರಿಸ್ಥಿತಿ ಕೈಮೀರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 150 ಮಕ್ಕಳ ತಜ್ಞರು ಇದ್ದಾರೆ. ಜೊತೆಗೆ ಮಕ್ಕಳಿಗೆ ಬೇಕಾದ ಐಸಿಯು, ಉಪಕರಣಗಳು ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿ ದ್ದೇವೆ. ದೊಡ್ಡವರಿಗೆ ನೀಡುವಂತೆ ಮಾತ್ರೆಗಳನ್ನು ಮಕ್ಕಳಿಗೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಪೀಡಿಯಾಟ್ರಿಕ್ ಮೆಡಿಕಲ್ ಕಿಟ್ ತಯಾರು ಮಾಡಲು ಸಿದ್ಧತೆ ನಡೆಸಿದ್ದೇವೆ.
ಸದ್ಯ ಮೈಸೂರಿನಲ್ಲಿ ದಿನಕ್ಕೆ ನಾಲೈದು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಅವರಿಗೆ ಸೋಂಕು ತಗುಲಿದರೂ ಅಪಾಯದ ಮಟ್ಟ ತಲುಪಿಲ್ಲ. ಹೀಗಂತ ಮುಂಜಾಗ್ರತೆ ತೆಗೆದುಕೊಳ್ಳದೆ ಇರುವಂತಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.