3.40 ಲಕ್ಷ ಆಶ್ರಯ ಮನೆಗಳ ನಿರ್ಮಾಣ ಕಾರ್ಯ 8-10 ತಿಂಗಳಲ್ಲಿ ಪೂರ್ಣ: ಸಚಿವ ವಿ.ಸೋಮಣ್ಣ

1 min read

ಮೈಸೂರುಅ.5-ಫಲಾನುಭವಿಗಳಿಗೆ ಆಶ್ರಯ ಮನೆ ವಿತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 3.40 ಲಕ್ಷ ಮನೆಗಳ ನಿರ್ಮಾಣ ಕಾರ್ಯ 8-10 ತಿಂಗಳಿನಲ್ಲಿ ಪೂರ್ಣವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿದ್ಯಾರಣ್ಯಾಪುರಂ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ಆಯೋಜಿಸಿದ್ದ ಮೋದಿ ಯುಗ್ ಉತ್ಸವ್’ ಕಾರ್ಯಕ್ರಮದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

3.40 ಲಕ್ಷ ಮನೆಗಳ ನಿರ್ಮಾಣದ ಪೈಕಿ ಕೆ.ಆರ್.ಕ್ಷೇತ್ರದಲ್ಲಿ 2,212 ಮನೆಗಳು ನಿರ್ಮಾಣವಾಗಲಿವೆ. ಇಷ್ಟು ಮನೆಗಳು 2015-16, 2017-18 ನೇ ಸಾಲಿನಲ್ಲೇ ಮಂಜೂರಾಗಿತ್ತು. ಬುಡಕಟ್ಟು ಜನಾಂಗದವರಿಗೆ 65 ಸಾವಿರ ಮನೆಗಳು ಮಂಜೂರಾಗಿದ್ದವು. ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದ್ದವು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಮನೆ ನಿರ್ಮಾಣ ಕಾಮಗಾರಿ ಆರಂಭವಾಗಿವೆ. ಫಲಾನುಭವಿಗಳು ಮನೆಗಳನ್ನು ಬಾಡಿಗೆಗೆ ಕೊಡದೆ ಮಾರಾಟ ಮಾಡದೇ ಅದರಲ್ಲಿಯೇ ವಾಸಿಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಲಕ್ಷಾಂತರ ಮನೆಗಳು ಮಂಜೂರು ಮಾಡಿದ್ದರೂ ಮನೆ ನಿರ್ಮಾಣ ಕಾಮಗಾರಿಯನ್ನು ಹಿಂದಿನ ಸರ್ಕಾರ ಆರಂಭಿಸಿರಲಿಲ್ಲ. ನನ್ನ ಅವಧಿಯಲ್ಲಿ ಹಿಂದಿನ ಅವಧಿಯ 1.80 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಶಾಸಕನಾದ ಮೇಲೆ ವಿವಿಧ ವಸತಿ ಯೋಜನೆಗಳಡಿ 3816 ಮನೆಗಳನ್ನು ಬಡವರಿಗೆ ನೀಡಿದ್ದೇನೆ. ಸಮೀಕ್ಷೆ ನಡೆಸಿದ 81 ಸಾವಿರ ಮಂದಿಯಲ್ಲಿ 11 ಸಾವಿರ ಮಂದಿ ಬಾಡಿಗೆ ಮನೆಯಲ್ಲಿರುವವರು ಅರ್ಜಿ ಸಲ್ಲಿಸಿದ್ದರು. ಈಗ ಗೊರೂರಿನಲ್ಲಿ 22.5 ಎಕರೆ ಪ್ರದೇಶದಲ್ಲಿ 2,212 ಮನೆಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಆದಷ್ಟು ಬೇಗ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

ಸಂಸದ ಪ್ರತಾಪಸಿಂಹ,ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್,ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಹೆಚ್ಚವರಿ ಆಯುಕ್ತ ಶಶಿಕುಮಾರ್‌ ಇತರರು ಇದ್ದರು.

About Author

Leave a Reply

Your email address will not be published. Required fields are marked *