ಬಿಜಿಎಸ್ ನೂತನ ಕೋವಿಡ್ ಕೇರ್ ಸೆಂಟರ್‌ಗೆ ಸಿಎಂ ಚಾಲನೆ
1 min readಬೆಂಗಳೂರು: ಯಶವಂತಪುರ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿ.ಜಿ.ಎಸ್, ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ಹಾಸ್ಪಿಟಲ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ನೂತನ ಕೋವಿಡ್ ಕೇರ್ ಸೆಂಟರ್‌ಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಶ್ರೀ ಶ್ರೀ ಶ್ರೀ ಪ್ರಕಾಶನಾಥ ಸ್ವಾಮೀಜಿಯವರು ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಕೆಂಗೇರಿಯ ಉತ್ತರಹಳ್ಳಿ ಮುಖ್ಯರಸ್ತೆಯ ಬಿ.ಜಿ.ಎಸ್. ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭವಾಗಿದ್ದು, ಸುಸಜ್ಜಿತ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಶ್ಲಾಘನೆ ವ್ಯಕ್ತಪಡಿಸಿದರು. ಆಮ್ಲಜನಕ ಸೌಲಭ್ಯವುಳ್ಳ 210 ಹಾಸಿಗೆಗಳು, 23 ವೆಂಟಿಲೇಟರ್ ಸೌಲಭ್ಯವುಳ್ಳ 43 ಐಸಿಯು ಹಾಸಿಗೆಗಳು, 30 ಹೆಚ್‌ಡಿಯು ಹಾಸಿಗೆಗಳು ಹಾಗೂ ಆಮ್ಲಜನಕ ಸೌಲಭ್ಯವಿಲ್ಲದ 100 ಸಾಮಾನ್ಯ ಹಾಸಿಗೆಗಳನ್ನು ಈ ಕೋವಿಡ್ ಕೇರ್ ಸೆಂಟರ್ ಹೊಂದಿದೆ. ಈ ಮೂಲಕ ಬಿಜಿಎಸ್ ಆಸ್ಪತ್ರೆ ಮಂಡಳಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇದರ ಸದುಪಯೋಗ ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ಸಿಗಲಿದೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ, ಬಿಜಿಎಸ್ ಮಠದಿಂದ ಕೋವಿಡ್ ರೋಗಿಗಳಿಗಾಗಿ ಹೊಸತಾಗಿ ಹೆಚ್ಚುವರಿ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಳೆದ ಒಂದು ವರ್ಷದಿಂದ ಕರೋನಾ ಕಾಣಿಸಿಕೊಂಡಿದ್ದು, ಕೋವಿಡ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡುವ ಕೆಲಸ ಮಾಡ್ತಿದ್ದೇವೆ. ಇದಕ್ಕಾಗಿ ಆಸ್ಪತ್ರೆಯ ಶೇ. 75ರಷ್ಟು ಬೆಡ್ ಮೀಸಲಿಟ್ಟಿದ್ದೇವೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇರುವ ಕಾರಣ, 13kL ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಅನ್ನು ಉದ್ಘಾಟನೆ ಮಾಡಲಾಗಿದೆ. ಪ್ರಾರಂಭದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆಯನ್ನು ಕಡ್ಡಾಯ ಮಾಡಲಾಗಿತ್ತು. ಆದರೆ, ಅದರ ಪಾಲನೆ ಸಮರ್ಪಕವಾಗಿ ಆಗದ ಕಾರಣ ಇಂದು ರೋಗಗಳು ಹೆಚ್ಚಾಗಿವೆ. ಇನ್ನು ಮುಂದಾದರೂ ಜನತೆ ಎಚ್ಚೆತ್ತುಕೊಳ್ಳಬೇಕು. ಈ ಸಮಯದಲ್ಲಿ ಕೆಲಸ ಮಾಡ್ತಿರೋ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳು ಎಂದು ತಿಳಿಸಿದರು.
2 ಸಾವಿರ ಸಸಿ ವಿತರಣೆ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾಗಿರುವ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರು ಹಾಗೂ ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರ ಮೂಲಕ ಮೈಸೂರಿನ ಹಸಿರು ಪ್ರತಿಷ್ಠಾನದ ವತಿಯಿಂದ ಎರಡು ಸಾವಿರ ಸಸಿಗಳನ್ನು ಮೈಸೂರು ಮುಡಾ ಅಧ್ಯಕ್ಷರಾದ ಹೆಚ್.ವಿ. ರಾಜೀವ್ ಅವರು ಶ್ರೀ ಮಠಕ್ಕೆ ಹಸ್ತಾಂತರಿಸಿದರು.
ಟ್ರಯಾಜ್ ಸೆಂಟರ್‌ನಿಂದ ಹಲವು ಉಪಯೋಗ ; ಸಿಎಂ
ಕೆಂಗೇರಿ ಉಪನಗರದಲ್ಲಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗುತ್ತಿರುವ ಟ್ರಯಾಜ್ ಸೆಂಟರ್ (ಸರದಿ ನಿರ್ಧಾರ ಕೇಂದ್ರ) ವನ್ನು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸರದಿ ನಿರ್ಧಾರ ಕೇಂದ್ರದಲ್ಲಿ 24*7 ವೈದ್ಯರು ಲಭ್ಯವಿದ್ದು, 3 ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಕೇಂದ್ರಗಳು ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳು ಲಭ್ಯವಿರುತ್ತವೆ. ಅಲ್ಲದೆ, ಈ ಕೇಂದ್ರದಲ್ಲಿರುವ ವೈದ್ಯರು ಎಲ್ಲ ಸಮಯದಲ್ಲಿ ತಜ್ಞರೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಅಗತ್ಯ ಸಲಹೆಗಳನ್ನು ಪಡೆಯುತ್ತಿರುತ್ತಾರೆ ಎಂದು ತಿಳಿಸಿದರು.
ಈ ಕೇಂದ್ರಗಳಲ್ಲಿ ವೈದ್ಯರು ರೋಗಿಗಳ ಭೌತಿಕ ಮೌಲ್ಯಮಾಪನ ನಡೆಸಿ ಅಗತ್ಯವಿದ್ದಲ್ಲಿ ಕೋವಿಡ್ ಆರೈಕೆ ಕೇಂದ್ರ ಆಸ್ಪತ್ರೆಗೆ ಸೇರಿಸುವಂತೆ ಸೂಕ್ತ ಶಿಫಾರಸು ಮಡುತ್ತಾರೆ. ಇಲ್ಲಿ ಲಭ್ಯವಿರುವ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಉಪಯೋಗಿಸಿ ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ತುರ್ತು ಆಮ್ಲಜನಕವನ್ನು ಒದಗಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದರು.
ಈ ಕೇಂದ್ರಕ್ಕೆ ಹೊಂದಿಕೊಂಡಿರುವಂತೆ ಒಂದು ಆಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರ ಆಸ್ಪತ್ರೆಗೆ ತಲುಪಿಸಲಾಗುವುದು. ಈ ಕೇಂದ್ರಗಳಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವ (ಮನೆ ಆರೈಕೆ) ರೋಗಿಗಳಿಗೆ ಅಗತ್ಯ ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮತಕ್ಷೇತ್ರದಲ್ಲಿ ಶಾಶ್ವತ ವ್ಯವಸ್ಥೆಗೆ ಶ್ರಮ; ಸಚಿವ ಎಸ್.ಟಿ.ಎಸ್
ನನ್ನ ಮತಕ್ಷೇತ್ರವಾದ ಯಶವಂತಪುರ ವ್ಯಾಪ್ತಿಯಲ್ಲಿ ಬಿ.ಜಿ.ಎಸ್, ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ಹಾಸ್ಪಿಟಲ್ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ನೂತನ ಕೋವಿಡ್ ಕೇರ್ ಸೆಂಟರ್ ಅನ್ನು ಇಂದು ತೆರೆಯಲಾಗಿದೆ. ಸಾರ್ವಜನಿಕ ಸೇವೆಗೆ ಶ್ರೀ ಆದಿಚುಂಚನಗಿರಿ ಮಠ ಹಾಗೂ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಯಾವಾಗಲೂ ಮುಂದು. ಈ ನಿಟ್ಟಿನಲ್ಲಿ ಮಹಾಸ್ವಾಮೀಜಿಗಳ ಜೊತೆ ಹಲವಾರು ಬಾರಿ ಭೇಟಿ ಮಾಡಿ ಮನವಿ ಮಾಡಿಕೊಂಡಾಗಲೂ ಸ್ಪಂದಿಸಿದ್ದಲ್ಲದೆ, ಜನತೆಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಆಭಾರಿ. ಅಲ್ಲದೆ, ಯಶವಂತಪುರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಸರ್ಕಾರೇತರವಾಗಿ ಸುಸಜ್ಜಿತ ಹಾಗೂ ಶಾಶ್ವತ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿಯೂ ಶ್ರಮವಹಿಸುತ್ತಿದ್ದೇನೆ ಎಂದು ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಲಾಕ್ಡೌನ್ ತೀರ್ಮಾನ ಮುಖ್ಯಮಂತ್ರಿಗಳದ್ದು; ಎಸ್ ಟಿ ಎಸ್
ಲಾಕ್ಡೌನ್ ವಿಚಾರವಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗಾಗಲೇ ಸರ್ಕಾರದ ವತಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ತಜ್ಞರ ಸಮಿತಿ ಹೇಳಿದ್ದನ್ನು ನಾವು ಪಾಲಿಸುತ್ತಾ ಬಂದಿದ್ದೇವೆ. ಲಾಕ್ಡೌನ್ ಅನ್ನು 10 ದಿನ ವಿಸ್ತರಣೆ ಮಾಡ್ಬೇಕು ಅನೋ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ತಿರ್ಮಾನವನ್ನು ತೆಗೆದುಕೊಳ್ತಾರೆ. ಎಲ್ಲ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಜೊತೆ ಇಂದು ವಿಡಿಯೋ ಸಂವಾದ ನಡೆಸಲಿರುವ ಮುಖ್ಯಮಂತ್ರಿಗಳು ನಂತರ ತೀರ್ಮಾನವನ್ನು ಪ್ರಕಟಿಸುತ್ತಾರೆ. ಕಳೆದ ಬಾರಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಾರಿ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಿ, ಮಾಹಿತಿ ಸಂಗ್ರಹಿಸುತ್ತಾರೆ ಎಂದು ಸಚಿವರಾದ ಸೋಮಶೇಖರ್ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.