ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
1 min readಕೊಪ್ಪಳ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಅವರು ಇಂದು ಅಂಜನಾದ್ರಿ ಬೆಟ್ಟದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಕೆಳಕಂಡ ಸೂಚನೆಗಳನ್ನು ನೀಡಿದರು.
• ಅಂಜನಾದ್ರಿ ಬೆಟ್ಟದ ಕ್ಷೇತ್ರಕ್ಕೆ ಯಾತ್ರಿಕರು ಅವರಿಗೆ ವಸತಿ ಹಾಗೂ ಇತರ ಸೌಲಭ್ಯಗಳನ್ನು ಪೂರೈಸಬೇಕು. 100 ಕೋಟಿ ರೂ. ವೆಚ್ಚದಲ್ಲಿ 600 ಕೊಠಡಿಗಳ ಯಾತ್ರಿನಿವಾಸ, ಆಸ್ಪತ್ರೆ, ಶೌಚಾಲಯಗಳ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು.
• ಈ ಉದ್ದೇಶಕ್ಕಾಗಿ ವಾಸ್ತುಶಿಲ್ಪಿಗಳನ್ನು ನೇಮಿಸಿಕೊಂಡು 2 ತಿಂಗಳ ಅವಧಿಯಲ್ಲಿ ಕಾಮಗಾರಿಯ ವಿನ್ಯಾಸವನ್ನು ಸಿದ್ಧಪಡಿಸಿ, ಅನುಮೋದನೆಯನ್ನು ಪಡೆದುಕೊಳ್ಳಬೇಕು.
• ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಕ್ರಮ ತೆಗೆದುಕೊಂಡು ಈ ಬಗ್ಗೆ ಸ್ಥೂಲವಾದ ವರದಿಯನ್ನು ಸಲ್ಲಿಸಬೇಕು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ 24 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಅನುದಾನವನ್ನೂ ನೀಡಲಾಗುವುದು.
• ವಾಹನ ನಿಲುಗಡೆ ವ್ಯವಸ್ಥೆಗೆ ಕನಿಷ್ಟ 35 ಎಕರೆ ಪ್ರದೇಶ ಅಗತ್ಯವಿದ್ದು, ಮೊದಲನೇ ಹಂತದಲ್ಲಿ ಕನಿಷ್ಟ 20 ಎಕರೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು.
• ಈ ಯೋಜನೆಯಡಿಯಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆಗಾಗಿ ಎಲ್ಲ ಕ್ರಮ ಕೈಗೊಳ್ಳಬೇಕು.
• ಈ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬಹಳಷ್ಟು ಧಾರ್ಮಿಕ ಕ್ಷೇತ್ರಗಳಲ್ಲಿ ಯಾತ್ರಿ ನಿವಾಸಗಳನ್ನು ನಿರ್ಮಿಸಲಾಗಿದ್ದರೂ, ನಿರ್ವಹಣೆ ಇರುವುದಿಲ್ಲ. ಮೊದಲ ದಿನದಿಂದಲೇ ನಿರ್ವಹಣೆ ಹಾಗೂ ಸ್ವಚ್ಛತಾ ಸೇವೆಯನ್ನು ಏಜೆನ್ಸಿಯಿಂದ ಪಡೆಯಬಹುದಾಗಿದೆ.
• ರಾಷ್ಟ್ರೀಯ ಹೆದ್ದಾರಿಯಿಂದ ಹಾಗೂ ಗಂಗಾವತಿಯಿಂದ ಸಂಪರ್ಕ ಕಲ್ಪಿಸಬಹುದಾಗಿದ್ದು, ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವುದು. ಯಾತ್ರಿನಿವಾಸದ ನಿರ್ಮಾಣದ ಜೊತೆಜೊತೆಯಲ್ಲಿಯೇ ರಸ್ತೆ ನಿರ್ಮಾಣ ಕಾಮಗಾರಿಯೂ 7-8 ತಿಂಗಳಲ್ಲಿ ಪೂರ್ಣಗೊಳ್ಳಬೇಕು.
• ಅಂಜನಾದ್ರಿ ಕ್ಷೇತ್ರಕ್ಕೆ ಯಾತ್ರಿಕರ ಭೇಟಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
• ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಮುಂದಿನ ಎರಡು ತಿಂಗಲ್ಲಿ ಭೂ ಸ್ವಾಧೀನ ಕಾರ್ಯಗಳು ಮುಗಿದು, 2 ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ನಾಲ್ಕು ತಿಂಗಳೊಳಗೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಬೇಕು. ಕಾಮಗಾರಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಿ ಅದರಂತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.