ಯೋಜನಾಬದ್ಧವಾಗಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಹಣಕಾಸಿನ ನೆರವು: ಸಿಎಂ ಬೊಮ್ಮಾಯಿ
1 min readಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಹೇಳಿರುವಂತೆ ಅಭಿವೃದ್ಧಿ ಕೆಲಸಗಳನ್ನು ಯೋಜನಾಬದ್ಧವಾಗಿ ಅನುಷ್ಠಾನ ಗೊಳಿಸಲು ಎಲ್ಲಾ ರೀತಿಯ ಹಣಕಾಸಿನ ನೆರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವರ್ಷ ಕಬಿನಿ ಹಾಗೂ ಕೆ.ಆರ್.ಎಸ್.ಜಲಾಶಯಗಳು ತುಂಬಿರುವುದು ಹರ್ಷ ತಂದಿದೆ. ಬೇಸಿಗೆಯಲ್ಲಿ ಯಾವುದೇ ತೊಂದರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಪರ ತೀರ್ಪು ಬರುವ ನಿರೀಕ್ಷೆ:
ತಮಿಳುನಾಡಿನ ಮುಖ್ಯಮಂತ್ರಿಗಳು ಮೇಕೆದಾಟು ಯೋಜನೆ ಬಗ್ಗೆ ತುರ್ತಾಗಿ ಅರ್ಜಿ ವಿಚಾರಣೆ ಮಾಡುವಂತೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಕೊಟ್ಟೇಕೊಡುತ್ತಾರೆ. ಅದು ರಾಜಕಾರಣ. ದೇಶದಲ್ಲಿ ಅಂತರರಾಜ್ಯ ಜಲ ವಿವಾದಗಳ ಕಾಯ್ದೆ ಇದೆ. ಹಾಗೂ ಕಾವೇರಿ ನ್ಯಾಯಮಂಡಲಿಯ ಆದೇಶವೂ ಬಂದಿದೆ. ಅವರ ಪಾಲಿನ ನೀರು ಕೊಟ್ಟ ಮೇಲೆ, ಮಿಕ್ಕಿದ್ದನ್ನು ನಾವು ಬಳಕೆ ಮಾಡುವ ಅಧಿಕಾರವಿದೆ. ಅದನ್ನು ಮೇಲ್ವಿಚಾರಣೆ ಮಾಡಲು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವಿದೆ. ವ್ಯವಸ್ಥೆಗಳಿದ್ದಾಗ ಅವರ ಹೇಳಿಕೆಗೆ ಯಾವುದೇ ಮಹತ್ವವಿಲ್ಲ. ಮುಂದಿನ ವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಷಯ ವಿಚಾರಣೆಗೆ ಬರುತ್ತಿದೆ. ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.