ಆಷಾಢ ಶುಕ್ರವಾರ ದೇವಿ ದರ್ಶನದಿಂದ ಪುನೀತರಾದ ಭಕ್ತರು.!
1 min readತಾಯಿ ಪಾದಕ್ಕೆ ಉಘೇ..ಉಘೇ…
ಆಷಾಢ ಶುಕ್ರವಾರ ದೇವಿ ದರ್ಶನದಿಂದ ಪುನೀತರಾದ ಭಕ್ತರು
ಭಕ್ತರು ಬೇಡಿದ್ದನ್ನು ಕರುಣಿಸುವ ತಾಯಿ,ಮಹಿಷ ಮರ್ಧಿನಿ, ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಳಾದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದ ಸಾವಿರಾರು ಭಕ್ತರು
ಆಷಾಢ ಶುಕ್ರವಾರದ ಮೊದಲ ದಿನ, ವರ್ಧಂತಿ ಉತ್ಸವದ ಪೂಜೆಯಲ್ಲಿ ಸರ್ವಾಲಂಕೃತವಾದ ದೇವಿಯ ದರ್ಶನ ಪಡೆಯಲು ಜಿಲ್ಲಾಡಳಿತ ಹಾಗೂ ದೇವಸ್ಥಾನ ಮಂಡಳಿಯವರು ಮಾಡಿದ ಅಚ್ಚುಕಟ್ಟು ವ್ಯವಸ್ಥೆಯಿಂದಾಗಿ ದೇವಿಯ ದರ್ಶನ ಸಾಂಗೋಪಾಂಗವಾಗಿ ನಡೆಯಿತು.
ಬೆಳಗಿನ ಮೊದಲ ಜಾವ 3,30 ಗಂಟೆಯಿಂದಲೇ ಆರಂಭವಾದ ಪೂಜಾ ವಿಧಿ ವಿಧಾನಗಳು,ಮಂತ್ರ ಘೋಷಗಳ ಇಂಪಾದ ಸದ್ದು ತಾಯಿಯ ದರುಶನವ ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಮೂಲೆಗಳಿಂದ ನೆರೆ ಹೊರೆ ಜಿಲ್ಲೆಗಳು ಹಾಗೂ ಪಕ್ಕದ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ಭಕ್ತಿ ಭಾವ ಪರವಶರಾಗಿ ಸದ್ದುಗದ್ದಲವಿಲ್ಲದೇ,ಉದ್ದುದ್ದ ಸಾಲುಗಳಲ್ಲಿ ಹೆಜ್ಜೆ ಹಾಕಿದರು.
ತಳಿರು ತೋರಣಗಳಿಂದ,ಬಗೆಬಗೆಯ ಹೂಗಳಿಂದ ಅಲಂಕೃತವಾದ ದೇವಾಲಯದ ಪ್ರಾಂಗಣ ಒಳಭಾಗ ತೆಂಗಿನಕಾಯಿ,ಕಬ್ಬು,ಥರಾವರಿ ಹೂಗಳ ಇಲಾಕೆ ಹಾಗೂ ತೋರಣಗಳು ದೇವಾಲಯದ ಅಂದವನ್ನು ನೂರ್ಮಡಿಗೊಳಿಸಿದ್ದವು.
ಜನಸಾಮಾನ್ಯರಿಂದಿಡಿದು ಸೆಲೆಬ್ರಿಟಿಗಳವರಗೆ ರಾಜಕಾರಣಿಗಳು, ಅಧಿಕಾರಿಗಳು, ಮಹಿಳೆಯರು,ಮಕ್ಕಳು ದೇವಿ ದರುಶನದಿಂದ ಪುನೀತರಾದರು.ಜನರೇ ಸ್ವಯಂ ಶಿಸ್ತು ಅಳವಡಿಸಿಕೊಂಡದ್ದರಿಂದ ಪೊಲೀಸರ ಕೆಲಸ ತುಸು ಹಗುರಾಗಿತ್ತು.
ಉಚಿತ ಬಸ್, ಹೆಚ್ಚಿದ ಮಹಿಳಾ ಭಕ್ತರು :
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಬಸ್ ಸೇವೆಯಿಂದಾಗಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು, ಕೆಲ ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿ ಸರ್ಕಾರದ ಉಚಿತ ಬಸ್ ಯೋಜನೆಯನ್ನು ಶ್ಲಾಘಿಸಿದರು.
ಹೊಟ್ಟೆ ತುಂಬಾ ಊಟ:
ಭಕ್ತರಿಗೆ ನೀಡುತ್ತಿದ್ದ ಪ್ರಸಾದ ರುಚಿಕರವಾಗಿದುದ್ದಲ್ಲದೇ ಹೊಟ್ಟೆ ತುಂಬಾ ಊಟ ಮಾಡಿ,ಅನ್ನವನ್ನ ಎಲೆಯಲ್ಲಿ ಪೋಲು ಮಾಡಬೇಡಿ ಎಂದು ಆಯೋಜಕರು ಮೈಕ್ ಮುಖಾಂತರ ಅನೌನ್ಸ್ ಮಾಡುತಿದ್ದರು. ನಗರದ ಜೋಡಿ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸೇವಾ ಸಮಿತಿಯವರು ಮೊದಲ ಆಷಾಢ ಶುಕ್ರವಾರದ ಅನ್ನದಾನಿ ಗಳಾಗಿದ್ದು,ಸುಮಾರು 30 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಳಿಸಿದರು