ಕೇಂದ್ರ ಬಜೆಟ್: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಒತ್ತು
1 min readನವದೆಹಲಿ,ಫೆ.1-ಕೇಂದ್ರ ಬಜೆಟ್ ಮಂಡಿಸುವ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಕ್ಷಣಾ ವಲಯಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಮಹತ್ವವನ್ನು ತಿಳಿಸಿದರು.
ಬಜೆಟ್ ಭಾಷಣ ಆರಂಭದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ದೇಶೀಯವಾಗಿ ರಕ್ಷಣಾ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲಾಗುವುದು. ಇದಕ್ಕಾಗಿ ದೇಶೀಯ ಉದ್ಯಮ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ತ್ತೇಜಿಸಲು ಮತ್ತು ರಕ್ಷಣಾ ಉಪಕರಣಗಳ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ದೇಶೀಯ ಉದ್ಯಮ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಬಂಡವಾಳ ಸಂಗ್ರಹಣೆಗಾಗಿ ಬಜೆಟ್ನ ಶೇ.68 ರಷ್ಟು ಮೀಸಲಿಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಕ್ಷಣಾ ವಲಯದಲ್ಲಿ ಬಂಡವಾಳ ಸಂಗ್ರಹಣೆಗಾಗಿ ಶೇ.58ರಷ್ಟು ಅನುದಾನ ಮೀಸಲಿಡಲಾಗಿತ್ತು. ಈ ಬಾರಿ ಶೇ.10ರಷ್ಟು ಅನುದಾನ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಕ್ಷಣಾ ವಲಯವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಇದನ್ನು ಸಾಧಿಸಲಾಗುವುದು. ರಕ್ಷಣಾ ಉಪಕರಣಗಳ ಆಮದು ಕಡಿಮೆ ಮಾಡಲು ದೇಶೀಯ ಉತ್ಪಾದನೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು ಎಂದರು.
ದೇಶದ ಗಡಿಗಳ ಸುರಕ್ಷತೆ ನಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ. ಹೀಗಾಗಿ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ಮೂಲಕ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು. ಮೂರೂ ರಕ್ಷಣಾ ಪಡೆಗಳ ಆಧುನೀಕರಣದಲ್ಲಿ ನಮ್ಮ ಸರ್ಕಾರ ಎಳ್ಳಷ್ಟೂ ಉದಾಸೀನತೆ ತೋರುವುದಿಲ್ಲ ಎಂದು ದೇಶಕ್ಕೆ ಭರವಸೆ ನೀಡಿದರು.