ಕನ್ನಂಬಾಡಿ ಅಮ್ಮನವರ ಬ್ರಹ್ಮ ರಥೋತ್ಸವ!

1 min read

ಪಿರಿಯಾಪಟ್ಟಣದ ಶಕ್ತಿದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ಬ್ರಹ್ಮರಥೋತ್ಸವ ಇಂದು ಸಂಭ್ರಮದಿಂದ ನಡೆಯಿತು. ಮಂಗಳವಾರ ಮುಂಜಾನೆಯಿಂದಲೇ ದೇವಾಲಯದಲ್ಲಿ ಅಮ್ಮನಿಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು. ಜಾತ್ರಾ ಮಹೋತ್ಸವಕ್ಕೆ ಬೆಳಗಿನಿಂದಲೇ ದೇವಾಲಯದಲ್ಲಿ ಸಿದ್ಧತಾ ಕಾರ್ಯಕ್ರಮಗಳು ಭರದಿಂದ ಸಾಗಿದವು. ಶ್ರೀಕನ್ನಂಬಾಡಿ ಅಮ್ಮನವರ ಉತ್ಸವ ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಿದ ಬಳಿಕ ಮಹಾಮಂಗಳಾರತಿ ನೆರವೇರಿಸಿ ದೇವಾಲಯದ ಸುತ್ತಲೂ ಪ್ರದಕ್ಷಿಣೆ ನಡೆಸಲಾಯಿತು. ಆನಂತರ ಪುಷ್ಪಾಲಂಕಾರಗಳಿಂದ ಅಲಂಕೃತಗೊಂಡಿದ್ದ ರಥದ ಬಳಿ ಉತ್ಸವ ಮೂರ್ತಿಯನ್ನು ತಂದು ರಥದ ಪ್ರದಕ್ಷಿಣೆ ನಡೆಸಿ 11.55ರ ಶುಭ ಮೇಷ ಲಗ್ನದಲ್ಲಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಸುತ್ತಲೂ ನೆರೆದಿದ್ದ ಭಕ್ತರು ದೇವತೆಗೆ ಹಣ್ಣು – ಜವನಗಳನ್ನು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಬಳಿಕ ಶಕ್ತಿ ದೇವತೆಗೆ ಮಹಾಮಂಗಳಾರತಿ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದ ಭಕ್ತರು ರಥವನ್ನು ಎಳೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ದೇವಾಲಯದ ಮುಂಭಾಗದಿಂದ ಹೊರಟ ರಥದ ಮೆರವಣಿಗೆಯು ಬಿ.ಎಂ. ರಸ್ತೆಯಲ್ಲಿ ಸಾಗಿ ಹುಣಸೆಕುಪ್ಪೆ ಗೇಟ್ ವರೆಗೆ ಎಳೆದುತಂದು ರಥವನ್ನು ನಿಲ್ಲಿಸಿ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಯಿತು. ಇನ್ನು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಬಿಸಿಲಿನ ಬೇಗೆಯಿಂದ ತಣಿಸಲು ಪಟ್ಟಣದ ಹಲವೆಡೆ ವಿವಿಧ ಭಕ್ತ ಮಂಡಳಿಗಳ ವತಿಯಿಂದ  ಮಜ್ಜಿಗೆ , ಪಾನಕ ಮತ್ತಿತರ ತಂಪು ಪಾನೀಯಗಳನ್ನು ವಿತರಿಸಲಾಯಿತು ಹಾಗೂ ಹಸಿವು ನೀಗಿಸಲು ರೈಸ್ ಬಾತ್, ಮೊಸರನ್ನ, ಕೇಸರಿ ಬಾತ್ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡುತ್ತಿದ್ದುದು ಕಂಡು ಬಂದಿತು.

 ಶಾಸಕ ಕೆ ಮಹದೇವ್ ರಥಕ್ಕೆ ಚಾಲನೆ ನೀಡಿದರು ಈ ಸಂದರ್ಭ ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಉಪಾಧ್ಯಕ್ಷೆ ನಾಗರತ್ನ ಸದಸ್ಯರಾದ ಕೆ ಮಹೇಶ್ ನಿರಂಜನ್ ರವಿ ಪಿಸಿ ಕೃಷ್ಣ ಮತ್ತಿತರರಿದ್ದರು ಇದೇ ಸಂದರ್ಭ ಬಿಎಂ ರಸ್ತೆ ಪುರಸಭೆ ಮುಂಭಾಗ ವಿದ್ಯುತ್ ದೀಪಾಲಂಕಾರ ಹಾಗೂ ವಸ್ತು ಪ್ರದರ್ಶನಕ್ಕೆ ಶಾಸಕ ಕೆ ಮಹದೇವ್ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗಲು ಸಿಪಿಐ ಬಿ.ಆರ್.ಪ್ರದೀಪ್, ಇನ್ಸ್ ಪೆಕ್ಟರ್ ಜಗದೀಶ್, ಪಿಎಸ್ ಐ ಪುಟ್ಟರಾಜು ಸುರೇಶ್   ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

About Author

Leave a Reply

Your email address will not be published. Required fields are marked *