ರಾಷ್ಟ್ರೀಯ ಸೇನಾ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ: ರಕ್ತದಾನ ಮಾಡಿ ಚಾಲನೆ ನೀಡಿದ ಮೈಸೂರು ಎಕ್ಸಪ್ರೆಸ್ ಜವಾಗಲ್ ಶ್ರೀನಾಥ್
1 min readಮೈಸೂರು,ಫೆ.1-ರಾಷ್ಟ್ರೀಯ ಸೇನಾ ದಿನಾಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಬ್ಲಡ್ ಆನ್ ಕಾಲ್ ಕ್ಲಬ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಭಾರತದ ಮಾಜಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಅವರ ಜೊತೆ ಮಂಡಿ ಪೊಲೀಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ರಘು, ಆರಕ್ಷಕ ನಿರೀಕ್ಷಕರಾದ ವಿಶ್ವನಾಥ್ ಅವರು ರಕ್ತದಾನ ಮಾಡಿದರು.
ಬಳಿಕ ಮಾತನಾಡಿದ ಮೈಸೂರು ಎಕ್ಸಪ್ರೆಸ್ ಜವಾಗಲ್ ಶ್ರೀನಾಥ್ ಅವರು, ನಾವು ಹಣ ಸಂಪಾದಿಸುವ ಭರದಲ್ಲಿ ಆರೋಗ್ಯವನ್ನ ಕಳೆದುಕೊಳ್ಳಬಾರದು. ರಕ್ತ ಮತ್ತೊಬ್ಬರ ರಕ್ತದಾನವೆನ್ನು ಉಳಿಸುತ್ತದೆ. ಹೀಗಾಗಿ ರಕ್ತದಾನ ಮಹಾದಾನ. ರಕ್ತದಾನ ಶಿಬಿರಗಳಿಗೆ ಯುವಪೀಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು ಎಂದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣವೇ ನಮ್ಮ ಸೈನಿಕರು. ನಮ್ಮ ದೇಶ ಮಾತ್ರವಲ್ಲ, ಇತರ ಎಲ್ಲಾ ದೇಶಗಳಲ್ಲೂ ಸೇನೆ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಸೈನಿಕರಿಗೆ, ಸೇನೆಗೆ ಗೌರವಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ 90 ಮಂದಿ ಯುವಕ, ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಈ ವೇಳೆ ಮಹಾಪೌರರಾದ ಸುನಂದಾ ಪಾಲನೇತ್ರ, ನೌಕಾಪಡೆಯ ನಿವೃತ್ತ ಸೇನಾಧಿಕಾರಿ ರವಿಕುಮಾರ್, ಎಎಸ್ಐ ನಟರಾಜ್, ಮುತ್ತಣ್ಣ, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ದೇವೆಂದರ್ ಪರಿಹಾರಿಯಾ, ಆನಂದ್ ಮಾಂಡೋತ್, ಸದಸ್ಯರಾದ ಆರ್.ಸೌಮ್ಯಾ, ಎ.ಜಿ.ಆದಿತ್ಯ, ಮಾಲಿನಿ ಪಾಲಾಕ್ಷ, ವೈದ್ಯರಾದ ಮಮತಾ, ಭಾರತಿ, ಜಯಂತ್, ಶಾರದ ಇತರರು ಹಾಜರಿದ್ದರು.