ಹಾಡ್ಯ ಗ್ರಾಮಸಭೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ
1 min readಮೈಸೂರು,ಜ.31-ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮಸಭೆಯಲ್ಲಿ ಮಾರಾಮಾರಿ ನಡೆದಿರುವ ಘಟನೆ ಇಂದು ನಡೆದಿದೆ. ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ ನಡೆದಿದೆ.
ಬಿಜೆಪಿ-ಕಾಂಗ್ರೆಸ್ ಮುಖಂಡರ ನಡುವೆ ನಡೆಯುತ್ತಿದ್ದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಂದೇಗಾಲ ಗ್ರಾಮದ ರಾಜಶೇಖರ್ ಮತ್ತು ಹಾಡ್ಯ ಗ್ರಾಮದ ಗಣೇಶ್ ಎಂಬವರು ಗಂಭೀರವಾಗಿ ಗಾಯಗೊಂಡವರು. ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಡ್ಯ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾದ ಮಹಾದೇವಮ್ಮ, ಪಿಡಿಒ ಕರಿಯಪ್ಪ ಅವರ ನೇತೃತ್ವದಲ್ಲಿ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಬಿಜೆಪಿ ಪಕ್ಷದ ಮುಖಂಡ ವೀರಭದ್ರಪ್ಪ @ ಪಾಪು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ರಾಜು ನಡುವೆ ವಾಸದ ಮನೆ ಹಂಚಿಕೆ ವಿಚಾರಕ್ಕೆ ಮಾತಿನ ಚಕಮಕಿ ಪ್ರಾರಂಭವಾಯಿತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಡೀ ಗ್ರಾಮಸಭೆಯ ರಣರಂಗವಾಯಿತು.
ವಾಸದ ಮನೆಗಳ ಹಂಚಿಕೆಯ ವಿಚಾರದಲ್ಲಿ ಆರಂಭವಾದ ಸಂಘರ್ಷ ವಿಕೋಪಕ್ಕೆ ತಿರುಗಿ ಖುರ್ಚಿ ಚೇರುಗಳನ್ನು ಬಿಸಾಡಿ ಸ್ಥಳದಲ್ಲೇ ಇದ್ದ ಭಾರೀ ಗಾತ್ರದ ಕಲ್ಲುಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ತಲೆಗೆ ಗಂಭೀರವಾಗಿದೆ. 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ ನಿರ್ಲಕ್ಷ್ಯ ಧೋರಣೆಯೇ ಸಂಘರ್ಷಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮಸಭೆಯಲ್ಲಿ ಗಲಾಟೆ ಪ್ರಾರಂಭವಾಗುತ್ತದೆ ಎಂಬ ವಿಚಾರ ತಿಳಿದಿದ್ದರೂ ಪಿಡಿಒ ಕರಿಯಪ್ಪ ಪೋಲಿಸ್ ಅಧಿಕಾರಿಗಳಿಗೆ ವಿಷಯ ತಿಳಿಸಿರಲಿಲ್ಲ. ಹುಲ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಹಾಡ್ಯ ಗ್ರಾಮದಲ್ಲಿ ಘಟನೆ ನಡೆದಿದೆ.