ವಿಶ್ವ ಮಟ್ಟದಲ್ಲಿ ದಾಖಲೆ ಬರೆದ ಭಗವದ್ಗೀತೆ ಪಾರಾಯಣ!
1 min readಅಮೆರಿಕಾದಲ್ಲಿ ಸಹಸ್ರಗಳ ಭಗವದ್ಗೀತಾ ಪಾರಾಯಣ : ಪ್ರಧಾನಿ ಮೆಚ್ಚುಗೆ
ಡಲ್ಲಾಸ್: ಮೈಸೂರಿನ ಅವಧೂತ ದತ್ತ ಪೀಠಾಧಿಪತಿ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗರ್ಶನದಲ್ಲಿ ಅಮೆರಿಕಾ ದೇಶದ ಡಲ್ಲಾಸ್ ನಗರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಂಪೂರ್ಣ ಭಗವದ್ಗೀತೆಯನ್ನು ಪಾರಾಯಣ ಮಾಡಿ ಐತಿಹಾಸಿಕ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಇಲ್ಲಿನ ಅಲೆನ್ ಈವೆಂಟ್ ಸೆಂಟರ್‌ನಲ್ಲಿ ನಡೆದ ಈ ಸಹಸ್ರಗಳ ಭಗವದ್ಗೀತಾ ಪಾರಾಯಣ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಡಲ್ಲಾಸ್ ನಲ್ಲಿ ನಡೆಯುತ್ತಿರುವ ಈ ಸಹಸ್ರಗಳ ಭಗವದ್ಗೀತೆ ಪಾರಾಯಣವು ವಿಶೇಷವಾಗಿದೆ. ಪೂಜ್ಯ ಶ್ರೀ ಸ್ವಾಮೀಜಿಯವರು ವಿದೇಶದಲ್ಲೂ ನಮ್ಮ ಭಾರತದ ಸಂಸ್ಕೃತಿಯನ್ನು ಪಸರಿಸುತ್ತಿರುವುದು ಶ್ಲಾಘನೀಯ ಎಂದು ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ.
ವಿಶ್ವದ ಗಮನ ಸೆಳೆದ ಈ ಕಾರ್ಯಕ್ರಮವು, ‘ಲಾರ್ಜೆಸ್ಟ್ ಸೈಮಲ್ಟೇನಿಯಸ್ ಹಿಂದೂ ಟೆಕ್ಸ್ಟ್ ರಿಸೈಟಲ್’ (ಅತಿದೊಡ್ಡ ಏಕಕಾಲಿಕ ಹಿಂದೂ ಪಠ್ಯ ವಾಚನ) ಎಂಬ ಗಿನ್ನಿಸ್ ದಾಖಲೆಯನ್ನೂ ಪಡೆದಿರುವುದು ಮತ್ತೊಂದು ವಿಶೇಷವಾಗಿದೆ.
ಶ್ರೀ ಸ್ವಾಮೀಜಿಯವರು ದೀಪ ಬೆಳಗಿಸಿ ಭಗವಾನ್ ಶ್ರೀಕೃಷ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಆರತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಗವದ್ಗೀತೆಯನ್ನು ಕಂಠಪಾಠ ಮಾಡಿದ 1500 ಮಂದಿ ಹಾಗೂ 700 ಮಂದಿ ಪುಸ್ತಕ ನೋಡಿ ಪಾರಾಯಣ ಮಾಡುವ ಮೂಲಕ ಪೂಜ್ಯ ಶ್ರೀ ಸ್ವಾಮೀಜಿಯವರಿಗೆ ಸಮರ್ಪಿಸಿದರು. ಒಟ್ಟಾರೆ 4000ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಶ್ರೀ ಸ್ವಾಮೀಜಿಯವರು ಶ್ರೀಕೃಷ್ಣ ಸ್ವರೂಪರಾದ ಭಗವದ್ಗೀತೆ ವಾಚಕರೆಲ್ಲರಿಗೂ ಸಾಷ್ಟಾಂಗ ನಮಸ್ಕಾರ ಮಾಡಿ, ಹೂವಿನಿಂದ ಅರ್ಚನೆ ಮಾಡಿದರು. ಪಾರಾಯಣಾದ್ಯಂತ ಶ್ರೀ ಸ್ವಾಮೀಜಿಯವರು ಗಾಯಕರ ಮಧ್ಯೆ ಸಂಚರಿಸಿದರು
ಪ್ರಾರಂಭದಲ್ಲಿ ಪೂಜ್ಯ ಶ್ರೀ ಸ್ವಾಮೀಜಿಯವರನ್ನು ದತ್ತ ಯೋಗ ಕೇಂದ್ರದ ಟ್ರಸ್ಟಿಗಳು ಮತ್ತು ಗೀತಾ ತಂಡದವರು ಸಭಾಂಗಣದ ಪ್ರವೇಶ ದ್ವಾರದಿದಂದ ಆದರದಿಂದ ಬರಮಾಡಿಕೊಂಡರು. ಶ್ರೀ ಸ್ವಾಮೀಜಿಯವರು ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಗೀತಾ ಶಿಕ್ಷಕರು ಪುಷ್ಪವೃಷ್ಟಿ ಮಾಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪೂಜ್ಯರು, ಭಗವದ್ಗೀತೆ ಕಲಿಕೆಗೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿದ ಪಾಲಕರು ಹಾಗೂ ಶಿಕ್ಷಕರನ್ನು ಪ್ರಶಂಸಿಸಿ, ಇದು ನಿಮ್ಮ ಮಕ್ಕಳಿಗೆ ನೀಡುತ್ತಿರುವ ಅಮೂಲ್ಯ ಕೊಡುಗೆ ಎಂದರು.
ಇದೇ ವೇಳೆ ಗೀತಾ ತಂಡವು ಶ್ರೀ ಸ್ವಾಮೀಜಿಯವರ 80 ನೇ ಜನ್ಮದಿನೋತ್ಸವ ಸಂಬಂಧ ನಮ್ಮಲ್ಲಿರುವ ತಮೋಗುಣ, ರಜೋಗುಣಗಳನ್ನು ಕತ್ತರಿಸಿ ಹಾಕಬೇಕು ಎಂಬುದರ ಸಂಕೇತವಾಗಿ ಬೃಹತ್ ಕೇಕ್ ಅನ್ನು ಕತ್ತರಿಸಿದರು.