ಆದಿ ಶಂಕರಾಚಾರ್ಯರ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಗೆ ಸಚಿವ ಎಸ್.ಟಿ.ಸೋಮಶೇಖರ್ ಸನ್ಮಾನ!

1 min read

ಉತ್ತರಾಖಂಡದ ಕೇದಾರನಾಥದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಶ್ರೀ ಆದಿ ಶಂಕರಾಚಾರ್ಯರ ನವೀಕೃತ ಪುತ್ಥಳಿ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಹಕಾರ ಸಚಿವರು ಮತ್ತು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸನ್ಮಾನಿಸಿ ಅಭಿನಂದಿಸಿದರು.

ಮೈಸೂರಿನಲ್ಲಿರುವ ಅರುಣ್ ಯೋಗಿರಾಜ್ ಅವರ ನಿವಾಸಕ್ಕೆ ಸಚಿವರು ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪುತ್ಥಳಿ ಕೆತ್ತನೆ ಕೆಲಸದ ಕುರಿತ ಅರುಣ್ ಅವರು ತಮ್ಮ ತಂಡದ ಕಾರ್ಯವೈಖರಿಯನ್ನು ಸಚಿವರಿಗೆ ವಿವರಿಸಿದರು. ಅರುಣ್ ಮತ್ತವರ ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಶಿಲ್ಪಕಲೆಯಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಸಚಿವರು, ಆದಿ ಶಂಕರಾಚಾರ್ಯರ ಪುತ್ಥಳಿ ಕೆತ್ತಿದ್ದು ನಮ್ಮ ಮೈಸೂರಿನವರು ಎಂದು ಕೇಳಿ ಸಂತಸವಾಯಿತು. ವಿಷಯ ತಿಳಿದ ಕೂಡಲೇ ಅವರನ್ನು ಭೇಟಿ ಮಾಡಿ ಸನ್ಮಾನಿಸಲಾಯಿತು ಎಂದರು.

ಅರುಣ್ ಯೋಗಿರಾಜ್ ಮಾಡಿದ ಶಂಕರಾಚಾರ್ಯರ ಮೂರ್ತಿ

ಆದಿ ಶಂಕರಾಚಾರ್ಯರ ಪುತ್ಥಳಿಯನ್ನು ಕೇದಾರನಾಥದಲ್ಲಿ ಮರುಸ್ಥಾಪನೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಮಾತ್ರವಲ್ಲದೆ ಹಲವು ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ಸ್ಮರಣೆ ಮಾಡಲಾಗುತ್ತಿದೆ. ಪಕ್ಷದ ವತಿಯಿಂದ ನಂಜನಗೂಡಿನಲ್ಲಿ ಸಹ ಅಭಿವೃದ್ಧಿ ಕಾರ್ಯಗಳ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದರು.

ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ ಸಂಭವಿಸಿದರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು
ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಅವರ ಗಮನಕ್ಕೆ ತರಲಾಗಿದೆ. ಇನ್ನೆರಡು ದಿನದಲ್ಲಿ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು.

ಮಳೆ ಹಾನಿ ಕುರಿತು ಶಾಸಕರು, ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಲಾಗಿದೆ. ಸಿಎಂ ಗಮನಕ್ಕೂ ತರಲಾಗಿದೆ. ನಗರದಲ್ಲಿ ದುರಸ್ತಿ ಕಾರ್ಯಕ್ಕೆ ಮೇಯರ್ ಅವರು ಪ್ರತಿ ವಾರ್ಡ್ ಗೆ 8 ಲಕ್ಷ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದರು.

ಚುನಾವಣೆ ಸೋಲು ಗೆಲುವನ್ನು ಸ್ವೀಕಾರ ಮಾಡುತ್ತೇವೆ. ಸೋತ ಮಾತ್ರಕ್ಕೆ ಕಾಂಗ್ರೆಸ್ ನವರಂತೆ ಮನೆ ಸೇರಲ್ಲ. ಸಿದ್ದರಾಮಯ್ಯ ವಿರೋಧ ಪಕ್ಷದವರು, ಹೀಗಾಗಿ ಅವರು ವಿರೋಧ ಮಾಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕ ನಾಗೇಂದ್ರ, ಮೂಡಾ ಅಧ್ಯಕ್ಷ ರಾಜೀವ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ, ಮೇಯರ್ ಸುನಂದಾ ಪಾಲನೇತ್ರ, ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *