ನಟ ಪುನೀತ್ ರಾಜ್‍ಕುಮಾರ್ ಅವರ ಆದರ್ಶ ಜೀವನ, ಸಾಧನೆ ಮುಂದಿನ ಪೀಳಿಗೆಗೆ ತಿಳಿಯಬೇಕು: ಸಚಿವ ವಿ.ಸೋಮಣ್ಣ
1 min readಬೆಂಗಳೂರು,ಜ.30-ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆದರ್ಶದ ಜೀವನ, ಸಾಧನೆ, ಜೀವನ ಮೌಲ್ಯಗಳು ಮುಂದಿನ ಪೀಳಿಗೆಗೆ ತಿಳಿಯಬೇಕು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ಪಾಲಿಕೆ ಕಚೇರಿಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಸವಿನೆನಪಿಗಾಗಿ ನಿರ್ಮಿಸಲಾದ ಒಳಾಂಗಣ ಕ್ರೀಡಾಂಗಣವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಯುಥ್ ಐಕಾನ್ ಎಂದೇ ಖ್ಯಾತರಾಗಿದ್ದ ಪುನೀತ್ ಅವರ ಹೆಸರಿನಲ್ಲಿ ಈ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಈ ಮೂಲಕ ಈ ಭಾಗದ ಕ್ರೀಡಾಸಕ್ತ ಯುವಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ಪುನೀತ್ ತಮ್ಮ ಸಾವಿನ ಬಳಿಕವೂ ಸಾಕಷ್ಟು ಜನರಿಗೆ ಪ್ರೇರಣೆಯಾಗಿದ್ದಾರೆ. ಅವರ ನಿಧನದ ಬಳಿಕ ಅವರ ಸಾವಿರಾರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡುವ ಮೂಲಕ ನಟನೊಬ್ಬನ ಆದರ್ಶಗಳನ್ನು ಜೀವಂತವಿರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಮೋಹನ್ ಕುಮಾರ್, ದಾಸೇಗೌಡ, ಉಮೇಶ್ ಶೆಟ್ಟಿ, ವಾಗೀಶ್, ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.