ಚಾಮುಂಡಿಬೆಟ್ಟ ಪ್ರವೇಶಕ್ಕೆ ಸಂಜೆ 6ರ ನಂತರ ಪ್ರವೇಶ ನಿರ್ಬಂಧ: ಆದೇಶ ಹಿಂಪಡೆಯುವಂತೆ ಡಿಸಿಗೆ ಮನವಿ
1 min readಮೈಸೂರು,ಅ.1-ಚಾಮುಂಡಿಬೆಟ್ಟ ಪ್ರವೇಶಕ್ಕೆ ಸಂಜೆ 6ರ ನಂತರ ಹೇರಿರುವ ನಿರ್ಬಂಧವನ್ನು ಹಿಂಪಡೆಯಬೇಕೆಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಚಾಮುಂಡಿಬೆಟ್ಟ ಪ್ರವೇಶಕ್ಕೆ ಸಂಜೆ 6 ರ ನಂತರ ಹೇರಿರುವ ನಿರ್ಬಂಧವನ್ನು ಹಿಂಪಡೆದು ರಾತ್ರಿ 9ರವರೆಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ತೀವ್ರತೆ ಗಣನೀಯವಾಗಿ ಕಡಿಮೆಯಾಗಿದೆ. ಜನರು ಸುರಕ್ಷತೆ ಕಾಪಾಡಿಕೊಂಡಿದ್ದಾರೆ. ಅಲ್ಲದೆ, ನಾಡಹಬ್ಬ ದಸರಾ ಮಹೋತ್ಸವವಿದೆ. ಇಂತಹ ಸಂದರ್ಭದಲ್ಲಿ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಾಮುಂಡಿ ಬೆಟ್ಟಕ್ಕೆ ಸಂಜೆ 6ರ ಮೇಲೆ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದು ಅನವಶ್ಯಕ ನಿರ್ಧಾರ. ದೂರದಿಂದ ಬರುವ ಪ್ರವಾಸಿಗರು, ಸ್ಥಳೀಯರು ನವರಾತ್ರಿಯಲ್ಲಿ ದೇವಿಯ ದರ್ಶನ ಪಡೆಯಲು ಬರುತ್ತಾರೆ. ಹೀಗಿರುವಾಗ ಸಂಜೆಯ ವೇಳೆ ಪ್ರವೇಶ ನಿಷೇಧಿಸಿದರೆ ಹೇಗೆ? ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳು ಸೇರಿದಂತೆ ಮತ್ತಿತರ ಪ್ರವಾಸಿ ಸ್ಥಳಗಳು ರಾತ್ರಿಯವರೆಗೂ ತೆರೆದಿರುತ್ತವೆ. ಹಾಗಿದ್ದ ಮೇಲೆ ಚಾಮುಂಡಿ ಬೆಟ್ಟಕ್ಕೆ ಮಾತ್ರ ಬೇರೆ ನಿಯಮವೇಕೆ? ಕಳೆದ ಬಾರಿ ದಸರಾ ಸಂದರ್ಭದಲ್ಲಿಯೂ ಕೊರೊನಾ ಕಾರಣದಿಂದಾಗಿ ಜನರು ಬೆಟ್ಟಕ್ಕೆ ಭೇಟಿ ನೀಡಲು, ದೇವಿಯ ದರ್ಶನ ಪಡೆಯಲು, ನವರಾತ್ರಿಯ ಪೂಜೆಗಳಿಗೆ ಸಾಕ್ಷಿಯಾಗಲು ಸಾಧ್ಯವಾಗಿಲ್ಲ. ಈ ಬಾರಿ ಕೊರೊನಾ ಕಡಿಮೆಯಾಗಿರುವ ಕಾರಣ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಚಾಮುಂಡಿ ಬೆಟ್ಟ ಪ್ರವೇಶಕ್ಕೆ ರಾತ್ರಿ 9 ಗಂಟೆಯವರೆಗೆ ಅವಕಾಶ ನೀಡಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಮನವಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಸಂಘ-ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.