ಮರೆತೋರುಂಟೆ ಮೈಸೂರು ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ!

1 min read

ಸಾಮಾಜಿಕ ಕಾನೂನುಗಳ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ – ಡಾ. ಶಿವಕುಮಾರ್

ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ.ಶಿವಕುಮಾರ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈಸೂರು ಮಹಾನಗರ ಪಾಲಿಕೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಅರಮನೆ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರಸು ಮಂಡಳಿ ಸಂಘ ಹಾಗೂ ಅರಸು ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಜಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ಮೈಸೂರಿನ ಇತಿಹಾಸಕ್ಕೆ ಆಧುನಿಕ ಮೈಸೂರಿನ ನಿರ್ಮಾತೃ ಗಳಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಅಪಾರವಾದದ್ದು ಎಂದರು.
ರಾಜಪ್ರಭುತ್ವದಲ್ಲಿ ಪ್ರಜೆಗಳು ರಾಜರ ಸೇವೆ ಮಾಡಬೇಕಾಗಿತ್ತು ಆದರೆ ರಾಜ ಪ್ರಭುತ್ವದ ನೈಜ ಅರ್ಥವನ್ನು ಅರ್ಥೈಸಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರು. ಪ್ರಜೆಗಳನ್ನು ಸಲಹಲಿಕ್ಕಾಗಿಯೇ ರಾಜನಿರುವುದು ಎಂಬುದನ್ನು ಮನಗಂಡಿದ್ದರು. ಪ್ರಜಾಪ್ರತಿನಿಧಿ ಸಭೆಯೊಂದರಲ್ಲಿ ರಾಜರು ತನ್ನ ಪ್ರಜೆಗಳಿಗೆ ಅಖಂಡವಾದ ಸುಖ ಸಂಪತ್ತನ್ನು ಒದಗಿಸುವುದೇ ನನ್ನ ಪರಮೋದ್ದೇಶವೆಂದಿದ್ದರು. ಆದ್ದರಿಂದಲೇ ಇಂದಿಗೂ ಎಲ್ಲರ ಮನೆ ಮನೆಗಳಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಶಾಶ್ವತವಾಗಿ ಉಳಿದುಕೊಂಡಿರುವುದು ಎಂದು ಅಭಿಪ್ರಾಯಪಟ್ಟರು.

1902ರ ಆಗಸ್ಟ್ 8 ರಂದು ಅಧಿಕಾರ ವಹಿಸಿಕೊಂಡ 18 ವರ್ಷದ ನಾಲ್ವಡಿ ಕೃಷ್ಣರಾಜ ಒಡೆಯರು ಅವರ ಆಡಳಿತದ ಸಮಯದಲ್ಲಿ ಮೈಸೂರಿಗೆ ನೀಡಿದ ಕೊಡುಗೆಗಳು ಅಪಾರ. ಹೊಸ ರೈಲುದಾರಿಗಳ ನಿರ್ಮಾಣ, ಗ್ರಾಮ ನಿರ್ಮಲೀಕರಣ, ನೀರಿನ ಸೌಕರ್ಯ, ಕೆ ಆರ್ ಎಸ್ ಡ್ಯಾಮ್ ನಿರ್ಮಾಣ, ವಾಣಿವಿಲಾಸ ಸಾಗರ ನಿರ್ಮಾಣ, 1914ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಆರಂಭ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, ಮಂಡ್ಯದಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಪ್ರಾರಂಭ,
1936 ರಲ್ಲಿ ಮೊಟ್ಟ ಮೊದಲ ಮೈಸೂರು ಪೇಪರ್ ಮಿಲ್ ಆರಂಭ, ಮಂಗಳೂರು ಹೆಂಚು ಕಾರ್ಖಾನೆ,
ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರಗಳ ಆರಂಭ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು ಎಂದು ಮಾಹಿತಿ ನೀಡಿದರು.

ಸಾಮಾಜಿಕ ಸಮಾನತೆಗಾಗಿ ದೇವದಾಸಿ ಪದ್ಧತಿ ನಿಷೇಧ, ಗೆಜ್ಜೆಪೂಜೆ ಪದ್ಧತಿ ಸಂಪೂರ್ಣ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ ಜಾರಿ, ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆ ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ,
ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ,
ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಮಾಡಿದರು. ಅವರ ಕಾಲದಲ್ಲಿ ರಾಜ್ಯದ ನಾನಾ ಭಾಗಗಳಲ್ಲಿ 270 ಉಚಿತ ಆಸ್ಪತ್ರೆಗಳು ಕಾರ್ಯಾರಂಭ ಮಾಡಿದವು ಎಂದರು.

ಮೈಸೂರಿನ ಇತಿಹಾಸದ ಪುಟಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ ಮತ್ತು ಕೊಡುಗೆಗಳು ಅತ್ಯಂತ ಶ್ಲಾಘನೀಯವಾದದ್ದು. ರಾಜನಾಗಿ ಆಡಳಿತದ ಚುಕ್ಕಾಣಿ ಹಿಡಿದು ಇಡೀ ಮೈಸೂರು ಪ್ರಾಂತ್ಯವನ್ನು ಇಂದು ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ಅವರು ಮಾತನಾಡಿ, ಇಡೀ ಏಷ್ಯಾದಲ್ಲಿ ಮೈಸೂರು ಯೋಜಿತ ನಗರ. ಇದಕ್ಕೆ ಕಾರಣೀಭೂತರು ನಾಲ್ವಡಿ ಕೃಷ್ಣರಾಜ ಒಡೆಯರು. ಇತಿಹಾಸದಲ್ಲಿಯೇ ಜನರಿಗಾಗಿ ಸಾಲ ಮಾಡಿ ಅಣೆಕಟ್ಟು ನಿರ್ಮಿಸಿದ ಏಕೈಕ ರಾಜ. ಮೈಸೂರಿಗೆ ಹಲವು ಪ್ರಥಮಗಳ ಕೊಡುಗೆ ನೀಡಿದ ದಕ್ಷ ಆಡಳಿತ ನಡೆಸಿದ ಹೆಮ್ಮೆಯ ಅರಸು ಕೃಷ್ಣರಾಜ ಒಡೆಯರ್ ಎಂದು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರಿನ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ, ಇದು ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಮೈಸೂರು ಜಿಲ್ಲೆ ಇಡೀ ರಾಜ್ಯಕ್ಕೆ ಕಿರೀಟವಿದ್ದಂತೆ. ಇಂತಹ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿರುವುದು ನನಗೆ ಬಹಳ ಹೆಮ್ಮೆಯ ವಿಷಯ. ರಾಜಮನೆತನಗಳನ್ನು ಸ್ಮರಿಸುವಾಗ ಕೆಲವೊಂದು ರಾಜರುಗಳ ಹೆಸರು ಮಾತ್ರ ಮನದಲ್ಲಿ ಅಚ್ಚಳಿಯದಂತೆ ಉಳಿದುಕೊಂಡು ಬಿಡುತ್ತವೆ. ಅವುಗಳಲ್ಲಿ ರಾಣಿ ಕೆಂಪ ನಂಜಮ್ಮಣಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರು ಹೆಸರುಗಳು ಸಹ ಪ್ರಮುಖವಾದವು. ಕೆಂಪ ನಂಜಮ್ಮಣಿಯವರು ವೈಯಕ್ತಿಕ ಜೀವನ ಮರೆತು ಪ್ರಜೆಗಳಿಗಾಗಿ ಚಿಂತಿಸಿದವರು ಎಂದರು.

ಅಂದಿನ ಕಾಲದಲ್ಲಿಯೇ ದೂರದೃಷ್ಟಿಯನ್ನು ಹೊಂದಿದ್ದ ನಾಲ್ವಡಿಯವರು ಹಿಂದಿನ ಅನುಭವಗಳನ್ನು ಆಧರಿಸಿ ಮುಂದಾಲೋಚಿಸಿ ಭವಿಷ್ಯಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ಅವರು ನೀಡಿದ ಕೊಡುಗೆಗಳಲ್ಲಿ ಎದ್ದು ತೋರುತ್ತದೆ. ಅಗಲವಾದ ರಸ್ತೆ, ಮುಚ್ಚಿದ ಒಳಚರಂಡಿ, ಅಣೆಕಟ್ಟುಗಳು, ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಹಾಗೂ ಅವುಗಳ ಕಾಯ್ದೆಗಳು ಮತ್ತು ಅವರ ಹಲವಾರು ಅಭಿವೃದ್ಧಿಯ ಕಾರ್ಯಗಳಲ್ಲಿ ಅವರು ಒಬ್ಬ ರಾಜರೂ ಹೌದು ಒಬ್ಬ ಋಷಿಯೂ ಹೌದು ಎಂದು ತಿಳಿಯುತ್ತದೆ. ಆದ್ದರಿಂದಲೇ ನಾಲ್ವಡಿಯವರನ್ನು ರಾಜರ್ಷಿ ಎಂದು ಸಂಭೋಧಿಸಲಾಗುವುದು. ಇಂತಹ ರಾಜ ಶ್ರೇಷ್ಠರ ಕೊಡುಗೆಗಳು ಮುಂದಿನ ಪೀಳಿಗೆಗೂ ತಲುಪಬೇಕು. ಇಂದಿನ ಯುವ ಜನತೆಗೆ ಅವರ ಸಾಧನೆಗಳನ್ನು ತಿಳಿಸುವ ಕೆಲಸಗಳು ಆಗಬೇಕು ಎಂದು ತಿಳಿಸಿದರು.

ಜಯಂತಿ ಸಂಬಂಧ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಟಿ ಎಸ್ ಶ್ರೀವತ್ಸ, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ರೂಪ ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ ಗೋವಿಂದರಾಜು, ಅರಸು ಮಂಡಳಿ ಅಧ್ಯಕ್ಷ ಲಿಂಗರಾಜು ಅರಸ್, ಇತಿಹಾಸ ತಜ್ಞರಾದ ನಂಜರಾಜ ಅರಸು ಹಾಗೂ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *