ಮೈಸೂರಿಗೆ ಜಯ ತಂದ ಶ್ರೇಯಸ್‌, ಶುಭಾಂಗ್‌!

1 min read

ಮೈಸೂರಿಗೆ ಜಯ ತಂದ ಶ್ರೇಯಸ್‌, ಶುಭಾಂಗ್‌
ಮೈಸೂರು :


ಶ್ರೇಯಸ್‌ ಗೋಪಾಲ್‌ ಅವರ ಅರ್ಧ ಶತಕ (62)ದ ನೆರವಿನಿಂದ ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡಕ್ಕೆ 18 ಓವರ್‌ಗಳಲ್ಲಿ 161 ರನ್‌ಗಳ ಜಯದ ಗುರಿ ನೀಡಲಾಯಿತು.


ಶುಭಾಂಗ್‌ ಹೆಗ್ಡೆ 11ರನ್‌ಗೆ 4 ವಿಕೆಟ್‌ ಗಳಿಸುವ ಮೂಲಕ ಶಿವಮೊಗ್ಗ ತಂಡ ಸೋಲಿನ ದವಡೆಗೆ ಸಿಲುಕಿತು. ನಿರಂತರ ವಿಕೆಟ್‌ ಕಳೆದುಕೊಂಡ ಕೆ. ಗೌತಮ್‌ ಪಡೆ 15.1 ಓವರ್‌ಗಳಲ್ಲಿ ಕೇವಲ 91 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಮೈಸೂರು ವಾರಿಯರ್ಸ್‌ ಪರ ಪ್ರತೀಕ್‌ ಜೈನ್‌ ಹಾಗೂ ವಿದ್ಯಾಧರ ಪಾಟೀಲ್‌ ತಲಾ 2 ವಿಕೆಟ್‌ ಗಳಿಸಿದರೆ, ಆದಿತ್ಯ ಗೋಯಲ್‌ ಮತ್ತು ಶ್ರೇಯಸ್‌ ಗೋಪಾಲ್‌ ತಲಾ 1 ವಿಕೆಟ್‌ ಗಳಿಸಿ ಜಯಕ್ಕೆ ನೆರವಾದರು. ಶ್ರೇಯಸ್‌ ಗೋಪಾಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಶಿವಮೊಗ್ಗ ಸ್ಟ್ರೈಕರ್ಸ್‌ ಅದ್ಭುತ ಆರಂಭ:
ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಶಿವಮೊಗ್ಗ ಸ್ಟ್ರೈಕರ್ಸ್‌ ತನ್ನ ಆಯ್ಕೆಯನ್ನು ದಿಟ್ಟವಾಗಿಯೇ ಸಮರ್ಥಿಸಿಕೊಂಡಿತು. ಸ್ಟಾಲಿನ್‌ ಹೂವರ್‌ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಅನುಭವಿ ಆಟಗಾರ ನಿಹಾಲ್‌ ಉಳ್ಳಾಲ್‌ ಕೇವಲ 6 ರನ್‌ ಗಳಿಸಿ ಎದುರಾಳಿಯ ನಾಯಕ ಗೌತಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಹೂವರ್‌ ಅವರ ಎರಡನೇ ಓವರ್‌ ಪಂದ್ಯದ ಮೂರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮತ್ತೊಂದು ಯಶಸ್ಸು. ಭರತ್‌ ನಾಗ್‌ ಕದಮ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರೊಂದಿಗೆ ತಂಡ 14 ರನ್‌ ಗಳಿಸುತ್ತಲೇ ತನ್ನ ಅಮೂಲ್ಯ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ನಾಯಕ ಕರುಣ್‌ ನಾಯರ್‌ ಕೆಲ ಹೊತ್ತು ಜವಾಬ್ದಾರಿಯುತ ಆಟ ಪ್ರದರ್ಶಿಸಿದರೂ ಕೆ. ಗೌತಮ್‌ ಅವರ ಸ್ಪಿನ್‌ ಜಾಲಕ್ಕೆ ಸಿಲುಕಿ 27ರನ್‌ಗೆ ತೃಪ್ತಿಪಡಬೇಕಾಯಿತು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಸೇರಿತ್ತು. ಕರುಣ್‌ ನಾಯರ್‌ ಕ್ರೀಸಿನಲ್ಲಿ ಇರುವ ತನಕ ಸವಾಲಿನ ಮೊತ್ತ ಗಳಿಸುವ ನಿರೀಕ್ಷೆಯನ್ನು ಮೈಸೂರು ವಾರಿಯರ್ಸ್‌ ಹೊಂದಿತ್ತು, ಆದರೆ ಅವರ ನಿರ್ಗಮನದಿಂದ ಮತ್ತೊಂದು ಸಾಧಾರಣ ಮೊತ್ತದ ಪಂದ್ಯವಾಗುವ ಲಕ್ಷಣ ಕಂಡು ಬಂತು.
ಮಿಂಚಿದ ಶ್ರೇಯಸ್‌, ದೇಶಪಾಂಡೆ: ನಾಯಕ ಕರುಣ್‌ ನಾಯರ್‌ ನಿರ್ಗಮಿಸಿದ ನಂತರ ಅಂಗಣಕ್ಕಿಳಿದ ಅನುಭವಿ ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌ ಅವರು ಪವನ್‌ ದೇಶಪಾಂಡೆ ಜೊತೆಗೂಡಿ 89 ರನ್‌ ಜೊತೆಯಾಟವಾಡಿದರು. 40 ಎಸೆತಗಳನ್ನು ಎದುರಿಸಿ 6 ಬೌಂಡರಿ ನೆರವಿನಿಂದ 43 ರನ್‌ ಗಳಿಸಿದ ದೇಶಪಾಂಡೆ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಆದರೆ ಅಂತಿಮವಾಗಿ ಕೆ. ಗೌತಮ್‌ ಎಸೆತದಲ್ಲಿ ಸಿದ್ಧಾರ್ಥ್‌ಗೆ ಕ್ಯಾಚ್‌ ನೀಡುವ ಮೂಲಕ ಅದ್ಭುತ ಜೊತೆಯಾಟವೊಂದು ಕೊನೆಗೊಂಡಿತು. ಮೊದಲ ಪಂದ್ಯದಲ್ಲಿ ಶ್ರೇಯಸ್‌ ಗೋಪಾಲ್‌ ಅವರ ಆತ್ಮೀಯ ಗೆಳೆಯ ಸಮರ್ಥ್‌ ಆರ್‌. ಅರ್ಧ ಶತಕ ಸಿಡಿಸಿದ್ದರು. ಅದೇ ರೀತಿ ಶ್ರೇಯಸ್‌ ಕೂಡ 62 ರನ್‌ ಸಿಡಿಸಿ ಮಹಾರಾಜ ಟ್ರೋಪಿಯ ಮೊದಲ ದಿನದಲ್ಲೇ ಅರ್ಧ ಶತಕ ಸಿಡಿಸಿದ ಎರಡನೇ ಆಟಗಾರರೆನಿಸಿದರು. ಆರಂಭದಲ್ಲಿ ಕ್ಯಾಚ್‌ ಡ್ರಾಪ್‌ ಆದರೂ ನಂತರ ನೈಜ ಬ್ಯಾಟಿಂಗ್‌ ಪ್ರದರ್ಶಿಸಿದ ಶ್ರೇಯಸ್‌, 5 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 62 ರನ್‌ ಗಳಿಸಿ ತಂಡದ ಚೇತರಿಕೆಗೆ ನೆರವಾದರು. ಅಂತಿಮ ಹಂತದಲ್ಲಿ ಶುಭಾಂಗ್‌ ಹೆಗ್ಡೆ (12) ಹಾಗೂ ಶಿವರಾಜ್‌ (12) ಮಿಂಚಿನ ಆಟ ಪ್ರದರ್ಶಿಸುವುದರೊಂದಿಗೆ ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತು.

ಸಂಕ್ಷಿಪ್ತ ಸ್ಕೋರ್‌:
ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 172 ರನ್‌. (ಶ್ರೇಯಸ್‌ ಗೋಪಾಲ್‌ 62, ಪವನ್‌ ದೇಶಪಾಂಡೆ 43, ಕರುಣ್‌ ನಾಯರ್‌ 27, ಶಿವರಾಜ್‌ 12, ಶುಭಾಂಗ್‌ ಹೆಗ್ಡೆ 12, ಸ್ಟಾಲಿನ್‌ ಹೂವರ್‌ 19ಕ್ಕೆ 2, ಕೃಷ್ಣಪ್ಪ ಗೌತಮ್‌ 32ಕ್ಕೆ 2, ಅವಿನಾಶ್‌ 35ಕ್ಕೆ 1)
ಶಿವಮೊಗ್ಗ ಸ್ಟ್ರೈಕರ್ಸ್‌: 15.1 ಓವರ್‌ಗಳಲ್ಲಿ 91 ರನ್‌. (ಕೆ. ಸಿದ್ಧಾರ್ಥ್‌ 21, ಕೃಷ್ಣಪ್ಪ ಗೌತಮ್‌ 23, ಪ್ರತೀಕ್‌ ಜೈನ್‌ 17ಕ್ಕೆ 2, ವಿದ್ಯಾಧರ ಪಾಟೀಲ್‌ 15ಕ್ಕೆ 2, ಆದಿತ್ಯ ಗೋಯಲ್‌ 18ಕ್ಕೆ 1, ಶುಭಾಂಗ್‌ ಹೆಗ್ಡೆ 11ಕ್ಕೆ 4, ಶ್ರೇಯಸ್‌ ಗೋಪಾಲ್‌ 29ಕ್ಕೆ 1)

About Author

Leave a Reply

Your email address will not be published. Required fields are marked *