ಚಲಿಸುತ್ತಿದ್ದ KSRTC ಬಸ್ ಫುಟ್ ಬೋರ್ಡ್ ಕುಸಿತ: ನಾಲ್ವರು ವಿಧ್ಯಾರ್ಥಿನಿಯರಿಗೆ ಗಾಯ
1 min readನಂಜನಗೂಡು: ಚಲಿಸುತ್ತಿದ್ದ ಕೆ.ಎಸ್ ಆರ್.ಟಿ. ಸಿ ಬಸ್ ನ ಫುಟ್ ಬೋರ್ಡ್ ಕುಸಿದ ಪರಿಣಾಮ ನಾಲ್ವರು ವಿಧ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಸಹಪ್ರಯಾಣಿಕರ ಸಮಯೋಚಿತ ಕಾರ್ಯಾಚರಣೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಹತ್ತಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ನಂಜನಗೂಡು ತಾಲ್ಲೂಕಿನ ವಳಗೆರೆ ಗ್ರಾಮದ ಸಮೀಪದಲ್ಲಿ ಘಟನೆ ನಡೆದಿದೆ.ಮುನ್ನೆಚ್ಚರಿಕೆ ವಹಿಸದ ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕೂಡಲೇ ಅಧಿಕಾರಿಯನ್ನ ಸಸ್ಪೆಂಡ್ ಮಾಡುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ.
ನಂಜನಗೂಡು ತಾಲ್ಲೂಕಿನ ಬಳ್ಳೂರುಹುಂಡಿ ಗ್ರಾಮದಿಂದ ಹುರ ,ವಳಗೆರೆ ಗ್ರಾಮಗಳ ಮಾರ್ಗವಾಗಿ ನಂಜನಗೂಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ನ ಫುಟ್ ಬೋರ್ಡ್ ಬಾಗಿಲು ಸಮೇತ ಕುಸಿದಿದೆ. ಫುಟ್ ಬೋರ್ಡ್ ಬಳಿ ನಿಂತಿದ್ದ ವಿಧ್ಯಾರ್ಥಿಗಳು ಕುಸಿದು ಬಿದ್ದಿದ್ದಾರೆ.ಕೂಡಲೇ ನೆರವಿಗೆ ಬಂದ ಸಹ ಪ್ರಯಾಣಿಕರು ಕುಸಿದ ಭಾಗದಲ್ಲಿ ಸಿಲುಕಿದ್ದ ವಿಧ್ಯಾರ್ಥಿಗಳನ್ನ ರಕ್ಷಿಸಿದ್ದಾರೆ. 4 ವಿದ್ಯಾರ್ಥಿನಿಯರಿಗೆ ಕೈ ಮತ್ತು ಬೆನ್ನಿಗೆ ಗಾಯವಾಗಿದೆ.ತುಕ್ಕು ಹಿಡಿದಿದ್ದರೂ ಮುನ್ನೆಚ್ಚರಿಕೆ ಕ್ರಮ ವಹಿಸದೆ ಬಸ್ ಬಳಸಿದ ಬಗ್ಗೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಂಜನಗೂಡು ಮತ್ತು ವಳಗೆರೆ ಮುಖ್ಯರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ್ದಾರೆ.
ನಂಜನಗೂಡಿನ ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ಶಂಕರ್ ಎಂಬುವರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ಶಂಕರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ ವೇಳೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಗಾಯಗೊಂಡಿರುವ ವಿದ್ಯಾರ್ಥಿನಿಯರಿಗೆ ಮೈಸೂರು ಹಾಗೂ ನಂಜನಗೂಡಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿ ಒಬ್ಬಳು ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..