ನಮಗೆ ನಾವೇ ಸ್ಪರ್ಧೆ ಮಾಡಿಕೊಳ್ಳಬೇಕು : ಶಾಸಕ ಎಸ್.ಎ ರಾಮ್ ದಾಸ್
1 min readಮೈಸೂರು :
ಕೆ.ಆರ್ ಕ್ಷೇತ್ರದ ಶಾರದಾ ವಿಲಾಸ್ ಶತಮಾನೋತ್ಸವ ಭವನದಲ್ಲಿ SSLC ವಿದ್ಯಾರ್ಥಿಗಳೊಂದಿಗೆ ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದ ಶಾಸ ಎಸ್.ಎ ರಾಮ್ ದಾಸ್ ಪರೀಕ್ಷೆಗೆ ಕೆಲವೇ ದಿನಗಳಿವೆ ಪರೀಕ್ಷೆಗೆ ಹಾಗೂ ಆಯಾಯ ವಿಷಯಕ್ಕೆ ಸಂಬಂಧಪಟ್ಟಂತೆ ತಯಾರಿ ಮಾಡಿಕೊಳ್ಳಬೇಕು, ಮಕ್ಕಳ ಓದಿಗೆ ಪೋಷಕರು ಕೂಡ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಮಾತನಾಡಿದರು.
ಪರೀಕ್ಷೆಯ ಭಯ ಮಕ್ಕಳಲ್ಲಿ ಇರುವುದು ಸಹಜ ಆದರೆ ನಾವು ಪರೀಕ್ಷೆಯ ಅಂಕಗಳನ್ನ ಬೇರೆಯವರಿಗೆ ಹೋಲಿಸಕೂಡದು ನಮ್ಮ ಅಂಕಗಳನ್ನು ನಾವೇ ನಮ್ಮ ಹಿಂದಿನ ಅಂಕಕ್ಕೆ ಹೋಲಿಸಿಕೊಂಡು ಎಷ್ಟು ಬೆಳವಣಿಗೆ ಆಗಿದೆ ಎಂದು ನೋಡಿಕೊಳ್ಳಬೇಕು ಆಗ ಮಾತ್ರ ವಿಕಸನವಾಗಲು ಸಾಧ್ಯ. ನಿಮಗೆ ನೀವೇ ಸ್ಪರ್ಧೆ ಮಾಡಿಕೊಳ್ಳಬೇಕು. ನೀವು ಪರೀಕ್ಷೆಗಳನ್ನು ಬರೆದಂತೆ ನಾನೂ ಕೂಡಾ 5 ವರ್ಷಗಳಿಗೊಮ್ಮೆ ಪರೀಕ್ಷೆ ಬರೆಯುತ್ತಿದ್ದೇನೆ ಅದರಲ್ಲಿ ವಿಫಲವಾಗಲಿ ಅಥವಾ ಪಾಸ್ ಆಗಲಿ ನಾನು ಎರಡನ್ನೂ ಒಂದೇ ತರಹ ಸ್ವೀಕಾರ ಮಾಡುತ್ತೇನೆ. ಫೆಬ್ರವರಿ 1 ನೆ ತಾರೀಖು ಪ್ರಧಾನ ಮಂತ್ರಿಗಳು ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೋಸ್ಕರವೇ ಪಿ.ಎಂ.ಇ ವಿದ್ಯಾ ಹಾಗೂ ಒಂದು ತರಗತಿ ಒಂದು ಟಿವಿ ಚಾನಲ್ ಅನ್ನು ನೀಡಿದ್ದಾರೆ, ಸುಮಾರು 200 ಟಿ. ವಿ ಚಾನಲ್ ಅನ್ನು ನೀಡಿದ್ದಾರೆ. ನಮ್ಮ ಪ್ರಯತ್ನದಲ್ಲಿ ನಾವು ವಿಫಲರಾಗಬಾರದು ಆದಷ್ಟು ಪ್ರಯತ್ನ ನಡೆಸಬೇಕು, ಅಕಸ್ಮಾತ್ ಪರೀಕ್ಷೆಯಲ್ಲಿ ಫೇಲ್ ಆದರೆ ಅದಕ್ಕೆ ಪೋಷಕರು ಮಕ್ಕಳಿಗೆ ಏನೂ ಹೇಳಬಾರದು, ಅವರ ಮೇಲೆ ಒತ್ತಡ ಹೇರಬಾರದು ಅವರ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಂಡು ಮುಂದೆ ದಾರಿ ತೋರಿಸುವ ಕೆಲಸವನ್ನು ಪೋಷಕರು ಮಾಡಬೇಕು. ಶಿಕ್ಷಣದ ಜೊತೆಗೆ ಕೌಶಲ್ಯವೂ ಅತಿ ಮುಖ್ಯವಾಗಿದೆ ,ಕೌಶಲ್ಯವನ್ನು ಸಣ್ಣ ವಯಸ್ಸಿನಿಂದಲೇ ನಾವು ಕೊಡಬೇಕು ಎಂಬ ದೃಷ್ಟಿಯಿಂದ ಕೌಶಲ್ಯವನ್ನು ಹೇಳಿಕೊಡುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಮನುಷ್ಯ ಬದುಕಿರುವ ತನಕವೂ ಸಹ ಅವನಿಗೆ ಕಲಿಕೆಯೇ, ಕಲಿಕೆ ಎಂಬುದು ಮುಗಿಯುವುದಿಲ್ಲ ವಿದ್ಯಾರ್ಥಿಗಳ ಜೀವನ ಎಂದರೆ ಅದು ಗೋಲ್ಡನ್ ಲೈಫ್ ಇದ್ದ ಹಾಗೇ ಎಷ್ಟಾಗುತ್ತದೋ ಅಷ್ಟು ಕಲಿಕೆಯಲ್ಲಿ ನೀವು ನಿರತರಾಗಬೇಕು. ರಾಜ್ಯ ಸರ್ಕಾರದ ಈ ಬಾರಿ ಬಜೆಟ್ ನಲ್ಲಿ ಮಕ್ಕಳಿಗಾಗಿಯೇ ಚೈಲ್ಡ್ ಬಜೆಟ್ ಎಂದು ಪ್ರತ್ಯೇಕವಾಗಿ ಘೋಷಣೆ ಮಾಡಿದ್ದಾರೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ,ಕೌಶಲ್ಯಕ್ಕೆ, ಆರೋಗ್ಯಕ್ಕೆ ಅದರಲ್ಲಿ ಹಣವನ್ನು ಮೀಸಲಿಟ್ಟಿದ್ದಾರೆ. ಭಾರತ ದೇಶದ ಭವಿಷ್ಯವನ್ನು ಬರೆಯುವವರು ನೀವು ಆ ದೃಷ್ಟಿಯಿಂದಲೇ ನಿಮ್ಮ ಈ SSLC ಘಟ್ಟ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿಮಗೆ SSLC ಆದ ಮೇಲೆ ಏನು ಮಾಡಬೇಕು ಎಂಬ ಗೊಂದಲ ಇರುತ್ತದೆ ಅದಕ್ಕಾಗಿಯೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಎಂಬ ಯೋಜನೆಯನ್ನು ಘೋಷಿಸಿದ್ದಾರೆ ಇದರ ಮೂಲಕ ನಿಮ್ಮ ಮುಂದಿನ ಓದಿನ ಬಗ್ಗೆ ಮಾರ್ಗದರ್ಶನ ನೀಡುವ ಯೋಜನೆ ಇದಾಗಿದೆ, ನಾವು ನಮ್ಮ ಕ್ಷೇತ್ರದಲ್ಲಿರುವ 4 ಸಾವಿರ SSLC ವಿದ್ಯಾರ್ಥಿಗಳ ಮನೆಗೆ ಮುಂದೇನು ಮಾಡಬೇಕು ಎಂಬ ಕೈಪಿಡಿಯನ್ನು ಕಲಿಸಿಕೊಡುತ್ತೇವೆ ಎಂದರು.
ಹಲವಾರು ವಿದ್ಯಾರ್ಥಿಗಳು ಶಾಸಕರಿಗೆ ಪ್ರಶ್ನೆಗಳನ್ನು ಕೇಳಿದರು. ಚಂದನ ಎಂಬ ಹುಡುಗಿ ಕೊಪ್ಪಲು ಊರಿನಿಂದ ಬರಲು ಬಸ್ ವ್ಯವಸ್ಥೆ ಸರಿಯಾಗಿಲ್ಲ ಎಂದು ಹೇಳಿಕೊಂಡಾಗ ಮಾನ್ಯ ಶಾಸಕರು ಕೂಡಲೇ ಕೆ.ಎಸ್.ಆರ್. ಟಿ. ಸಿ ಅಧಿಕಾರಿಗಳಿಗೆ ಕರೆ ಮಾಡಿ ನಾಳೆಯಿಂದ ಬಸ್ ವ್ಯವಸ್ಥೆ ಮಾಡಲು ಹೇಳಿದರು. ಉದಯ್ ಎಂಬ ವಿದ್ಯಾರ್ಥಿ ಮಾತನಾಡಿ ನನ್ನ ಸ್ನೇಹಿತನಿಗೆ SSLC ಪರೀಕ್ಷೆ ಬರೆಯಬೇಕೆಂಬ ಆಸೆ ಇದೆ ಆದರೆ ಅವನಿಗೆ ಕಾಡು ಬಡತನವಿದೆ ಈ ಬಾರಿ ಪರೀಕ್ಷೆ ಕಟ್ಟಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡ ಇದಕ್ಕೆ ಉತ್ತರಿಸಿದ ಶಾಸಕರು ಮುಂದಿನ ಜೂನ್ ನಲ್ಲಿ ಅವನಿಗೆ ಪರೀಕ್ಷೆ ಕಟ್ಟಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಅಲ್ಲೇ ಇದ್ದ ಅಧಿಕಾರಿಗಳಿಗೆ ಗಮನಹರಿಸುವತ್ತ ಹೇಳಿದರು.
ರಶ್ಮಿ ಎಂಬ ವಿದ್ಯಾರ್ಥಿನಿಯು ನಾನು ನನ್ನ ಸಂಬಂಧಿಕರ ಮನೆಯಲ್ಲಿ ಇದ್ದುಕೊಂಡು ಓದುತ್ತಿದ್ದೇನೆ ಮುಂದೆ ನನಗೆ ಎಲ್ಲಿ ಓದಲು ಹಾಕುತ್ತಾರೋ ಗೊತ್ತಿಲ್ಲ ಎಂದು ದುಃಖದಿಂದ ಹೇಳಿಕೊಂಡಲು ಆಗ ಮಾನ್ಯ ಶಾಸಕರು ಏನೂ ಚಿಂತಿಸುವುದು ಬೇಡ ಒಳ್ಳೆಯ ಕಾಲೇಜಿನಲ್ಲಿ ಶಿಕ್ಷಣ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಧೈರ್ಯ ತುಂಬಿದರು. ಕಳೆದ ವರ್ಷ SSLC ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನವನ್ನು ಮಾನ್ಯ ಶಾಸಕರು ನೆರವೇರಿಸಿದರು.
ಸದರಿ ರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರ ರಾಜೇ ಅರಸ್, ಮೈಸೂರು ದಕ್ಷಿಣ ವಲಯದ ಬಿ.ಇ. ಓ ಆರ್ ರಾಮಾರಾಧ್ಯ, ಶಾರದಾವಿಲಾಸ್ ಕಾಲೇಜಿನ ಕಾರದರ್ಶಿಗಳಾದ ಚಂದ್ರಶೇಖರ್, ಶಿಕ್ಷಕರ ಸಂಘದ ಸೋಮೇಗೌಡ, ಸುರೇಶ್, ಬಿ.ಆರ್.ಸಿ ನಾಗೇಶ್, ಬಿ.ಆರ್.ಪಿ ಶ್ರೀಕಂಠ ಶಾಸ್ತ್ರಿ ಇನ್ನಿತರ ಶಾಲಾ ಮುಖ್ಯಸ್ಥರುಗಳು ಹಾಜರಿದ್ದರು.