ಕೇಂದ್ರ ಬಜೆಟ್ ಕೋವಿಡ್ ನಂತರದ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿ: ಶಾಸಕ ಎಸ್.ಎ.ರಾಮದಾಸ್
1 min readಮೈಸೂರು,ಫೆ.1-ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಕೋವಿಡ್ ನಂತರದ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇದು ದೇಶದ ಪ್ರಗತಿಗೆ ಒಂದು ಹೊಸ ಮುನ್ನುಡಿ ಬರೆದಂತಿದೆ. ವಿಶೇಷವಾಗಿ ಬಜೆಟ್ ನಲ್ಲಿ ಪಿಎಂ ಆವಾಸ್ ಯೋಜನೆಗೆ ರೂ.48,000 ಕೋಟಿ ಅನುದಾನ ಮೀಸಲಿಟ್ಟಿದ್ದು, ಎಲ್ಲರಿಗೂ ಸೂರು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಗೆ ಆದ್ಯತೆ ನೀಡಲಾಗಿದ್ದು, 2022-23ರಲ್ಲಿ 80 ಲಕ್ಷ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.
ರಕ್ಷಣಾ ಬಜೆಟ್ ನ ಶೇ.35ರಷ್ಟು ಅನುದಾನ ಸಂಶೋಧನೆಗೆ ಮೀಸಲಿಡಲಾಗಿದ್ದು, ಶೇ.68ರಷ್ಟು ಭಾರತದಲ್ಲೇ ಉತ್ಪಾದನೆಗೆ ಒತ್ತು ನೀಡಲಾಗಿದೆ. ರಕ್ಷಣೆ ಕ್ಷೇತ್ರದಲ್ಲಿಯೂ ಸಹ ಆತ್ಮನಿರ್ಭರತೆ ಹೊಂದುವುದಕ್ಕಾಗಿ ಸ್ಥಳೀಯವಾಗಿಯೇ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗಿದೆ.
ವಿಶೇಷವಾಗಿ ಡಿಜಿಟಲ್ ಕರೆನ್ಸಿಯನ್ನು ಈ ಸಾಲಿನಲ್ಲಿ ಪರಿಚಯಿಸಿದ್ದಾರೆ. 2022 ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ “ಡಿಜಿಟಲ್ ರುಪೀ” ಪರಿಚಯಿಸಲಿದೆ. ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಈ ಪಾಸ್ ಪೋರ್ಟ್ ಅನ್ನು ಪರಿಚಯಿಸಲಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭದಿಂದಲೂ ಡಿಜಿಟಲೀಕರಣ, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಈ ಬಾರಿಯ ಬಜೆಟ್ ನಲ್ಲಿ ಡಿಜಿಟಲ್ ಆಸ್ತಿ ಮೇಲೆ ಶೇ.30ರಷ್ಟು ತೆರಿಗೆ, ಸಹಕಾರ ಸಂಘಗಳಿಗೆ ತೆರಿಗೆ ಮುಕ್ತಿ ದೊರೆಯಲಿದೆ. ಇನ್ನು ಹಣಕಾಸಿನ ಒಳಹರಿಯುವಿಕೆಗೆ ಉತ್ತೇಜನ ನೀಡಲು ಕೋರ್ ಬ್ಯಾಂಕಿಂಗ್ ಪರಿಹಾರದೊಂದಿಗೆ ಎಲ್ಲಾ ಅಂಚೆ ಕಚೇರಿಗಳನ್ನು ಜೋಡಣೆ ಮಾಡಲಾಗುವುದು. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ಗಳನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ಗಳು ಸ್ಥಾಪಿಸಲಿವೆ. ಖಾಸಗಿ ಟೆಲಿಕಾಂ ಪೂರೈಕೆದಾರರು 2022-23ರೊಳಗೆ 5G ಮೊಬೈಲ್ ಸೇವೆಗಳನ್ನು ನೀಡಲು ಅನುಕೂಲವಾಗುವಂತೆ 2022 ರಲ್ಲಿ ಸ್ಪೆಕ್ಟ್ರಮ್ ಹರಾಜು ನಡೆಯಲಿದ್ದು ಭಾರತದಲ್ಲಿ ಶೀಘ್ರವೇ 5ಜಿ ಸೇವೆ ಬರಲಿದೆ.
ಒಟ್ಟಾರೆಯಾಗಿ ಈ ಬಜೆಟ್ ಯಾವುದೋ ಒಂದು ರಾಜ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ಘೋಷಿಸುವ ಪರಂಪರೆಯನ್ನು ಈ ಬಾರಿ ಕೈ ಬಿಟ್ಟು ಸಂಪೂರ್ಣ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು ಪ್ರತಿಯೋರ್ವ ಪ್ರಜೆಯನ್ನೂ ಸ್ವಾವಲಂಬಿಯಾಗಿಸಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.