ಸರ್ಕಾರಿ ಶಾಲೆಯಲ್ಲಿ ನಮಾಜ್ ಗೆ ಅವಕಾಶ: ಹಿಂದೂ ಕಾರ್ಯಕರ್ತರಿಂದ ವಿರೋಧ ವ್ಯಕ್ತ
1 min readಕೋಲಾರ,ಜ.23-ಸರ್ಕಾರಿ ಶಾಲೆಯಲ್ಲಿ ನಮಾಜ್ ಗೆ ಅವಕಾಶ ಕಲ್ಪಿಸಿದ್ದಕ್ಕೆ ಹಿಂದೂ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.
ಕೋಲಾರದ ಮುಳಬಾಗಿಲು ನಗರದ ಸೋಮೇಶ್ವರ ಪಾಳ್ಯದ ಬಳೆಚಂಗಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಮಕ್ಕಳಿಗೆ ನಮಾಜ್ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಅವಕಾಶ ಕಲ್ಪಿಸಿ ಕೊಟ್ಟಿದ್ದರು.
ಇದು ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಶಾಲೆಗೆ ತೆರಳಿದ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ತಹಸೀಲ್ದಾರ್ ಶೋಭಿತಾ ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದರು. ಬಿಇಒ ಸೂಚನೆ ಮೇರೆಗೆ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಂಯೋಜಕ ಅಂಜಿತ್ ಕುಮಾರ್ ನೇತೃತ್ವದ ತಂಡವು ಶಾಲೆಯ ಮುಖ್ಯ ಶಿಕ್ಷರು, ಸಹ ಶಿಕ್ಷರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದು, ಬಿಇಒ ಅವರಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಸೋಮವಾರ ಪ್ರಾಂಶುಪಾಲರ ತಲೆದಂಡವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.