ಒಕ್ಕಲಿಗರ ಸಂಘದ ಮತ ಮರು ಎಣಿಕೆಗೆ ಮನವಿ: ಅರ್ಜಿ ಅಂಗೀಕರಿಸಿದ ರಾಜ್ಯ ಹೈಕೋರ್ಟ್
1 min readಸಂಘದ ಚುನಾವಣಾಧಿಕಾರಿ, ಆಡಳಿತಾಧಿಕಾರಿಗೆ ನೋಟಿಸ್ ಜಾರಿ
ಬೆಂಗಳೂರು: ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಮರುಮತ ಎಣಿಕೆ ಮಾಡಬೇಕು ಎಂದು ಸಂಘದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸತೀಶ್ ಕಡತನಮಲೆ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಿಚಾರಣೆಗೆ ಅಂಗೀಕಾರ ಮಾಡಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ರಜಾಕಾಲದ ಏಕ ಸದಸ್ಯ ನ್ಯಾಯಪೀಠವು, ಒಕ್ಕಲಿಗರ ಸಂಘದ ಚುನಾವಣಾಧಿಕಾರಿ ಹಾಗೂ ಸಂಘದ ಆಡಳಿತಾಧಿಕಾರಿ ಅವರಿಗೆ ನೊಟೀಸ್ ಜಾರಿ ಮಾಡಿದೆ.
ಈ ಬಗ್ಗೆ ರಜಾ ಕಾಲ ಮುಗಿದ ನಂತರ ಪುನಾ ನ್ಯಾಯಾಲಯದಿಂದ ಆದೇಶ ಪಡೆದುಕೊಳ್ಳುವಂತೆ ಅರ್ಜಿದಾರರಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.
ಸಂಘದ ಮತ ಎಣಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ. 389 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆದರೂ ಒಬ್ಬ ಅಭ್ಯರ್ಥಿಗೆ ಕೇವಲ 25 ಪ್ರವೇಶ ಪಾಸ್ ನೀಡಲಾಗಿತ್ತು. 25 ಪಾಸ್ ಗಳನ್ನು ಇಟ್ಟುಕೊಂಡು 389 ಕೇಂದ್ರಗಳಲ್ಲಿ ಮತ ಎಣಿಕೆ ವೀಕ್ಷಿಸಲು ಸಾಧ್ಯವೇ? ಈ ವಿಷಯವನ್ನು ಆ ಸಂದರ್ಭದಲ್ಲೇ ಚುನಾವಣಾ ಅಧಿಕಾರಿಗೆ ಲಿಖಿತ ದೂರು ನೀಡಿದ್ದರೂ ಅವರು ಪರಿಗಣನೆ ಮಾಡಲಿಲ್ಲ. ಈ ಕಾರಣಕ್ಕೆ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ಸತೀಶ್ ಕಡತನಮಲೆ ತಿಳಿಸಿದ್ದಾರೆ.