ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ- ಕೈಜೋಡಿಸಿದ ಯದುವೀರ್ ಒಡೆಯರ್!

1 min read

ಮೈಸೂರು – ಚಾಮುಂಡಿ ಬೆಟ್ಟ : ಸಾಂಸ್ಕೃತಿಕ ನಗರಿ ಮೈಸೂರಿನ ಕಳಶಪ್ರಾಯ ಎಂದರೆ ಅದು ನಮ್ಮ ಹೆಮ್ಮೆಯ ಚಾಮುಂಡಿ ಬೆಟ್ಟ. ಮೈಸೂರಿಗರ ಅಸ್ಮಿತೆ ಎಂದರು ತಪ್ಪಿಲ್ಲ. ಇಂತಹ ಚಾಮುಂಡಿ ಬೆಟ್ಟದಲ್ಲೀಗಾ ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಬೆಟ್ಟಕ್ಕೆ ಸಂಚಕಾರ ತರುವ ಕೆಲಸ ಆಗುತ್ತಿದೆ. ಇದಕ್ಕೆ ಮೈಸೂರಿಗರು ಸೇರಿದಂತೆ ಸಾರ್ವಜನಿಕರು ಕೂಡ ಆಕ್ರೋಶ ಹಾಗೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಯದುವಂಶದ ಮಹಾರಾಜರಾದ ಯದುವೀರ್ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅವೈಜ್ಞಾನಿಕ ಕಾಮಗಾರಿ ಬೇಡ ಹಾಗೂ ಅಭಿವೃದ್ಧಿ ಕಾರ್ಯಕ್ರಮ ಚಾಮುಂಡಿ ಬೆಟ್ಟದಲ್ಲಿ ಬೇಡವೆ ಬೇಡ ಎನ್ನುತ್ತಿದ್ದಾರೆ. ಆದರು ಕೂಡ ಸರ್ಕಾರ ಮಾತ್ರ ಇದಕ್ಕೆ ನೂರು ಕೋಟಿ ಯೋಜನೆ ಅದು ಇದು ಎಂದು ಏನೇನೋ ಸಿದ್ದತೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೇವ್ ಚಾಮುಂಡಿ ಬೆಟ್ಟ ಎಂದು ಅಭಿಯಾನ ಕೂಡ ಶುರುವಾಗಿದೆ.

ಮಾಜಿ ಪಾಲಿಕೆ ಸದಸ್ಯರಿಂದಲು ಆಕ್ಷೇಪ! ಪತ್ರ ಬರೆದು ಅನವಶ್ಯಕ ಕಾಮಗಾರಿ ಬೇಡ ಎಂದು ಒತ್ತಾಯ- ಪತ್ರದ ಸಾರಾಂಶ ಇಲ್ಲಿದೆ.

ಮೈಸೂರಿನ ಅಸ್ಮಿತೆ ಚಾಮುಂಡಿಬೆಟ್ಟದ ರಕ್ಷಣೆಯಾಗಬೇಕಿದೆ
ಮಾನ್ಯರೆ,

ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅಸ್ಮಿತೆ ಮತ್ತು ಮುಕುಟಪ್ರಾಯದಂತಿರುವ ಚಾಮುಂಡಿಬೆಟ್ಟ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ.

ಮನುಷ್ಯನ ದುರಾಸೆ ಹಾಗೂ ಆಡಳಿತಶಾಹಿ ವರ್ಗದ ಬೇಜವಾಬ್ದಾರಿ ಪರಿಣಾಮ ಇಂದು ಬೆಟ್ಟಕ್ಕೆ ಕಂಟಕ ಉಂಟಾಗಿದೆ. ಮೈಸೂರಿನ ಪ್ರಾತಿನಿಧಿಕ ಕುರುಹಾಗಿರುವ ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ ಸೇರಿದಂತೆ ಪ್ರಮುಖ ಪ್ರವಾಸಿ ಸ್ಥಳಗಳೇ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ದೊಡ್ಡ ಅಪಾಯವೊಂದರ ಮುನ್ಸೂಚನೆಯೇ ಸರಿ.

ಅಂಬಾವಿಲಾಸ ಅರಮನೆ ಸೋರುತ್ತಿದೆ. ಮೃಗಾಲಯದಲ್ಲಿನ ಪ್ರಾಣಿಗಳು ಸೊರಗುತ್ತಿವೆ. ಇದರ ನಡುವೆಯೇ ಚಾಮುಂಡಿ ಬೆಟ್ಟದ ಒಂದು ಮಗ್ಗಲು ಕುಸಿದಿದೆ. ಇದು ಆಡಳಿತ ಬೇಜವಾಬ್ದಾರಿಯಲ್ಲದೆ ಮತ್ತೇನು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಬೆಟ್ಟದಲ್ಲಿನ ನಂದಿಗೆ ಹೋಗುವ ಮಾರ್ಗದಲ್ಲಿ ಅಂದಾಜು 150 ಅಡಿಗಳಷ್ಟು ಉದ್ದದ ರಸ್ತೆ ಸುಮಾರು 50 ಅಡಿ ಆಳಕ್ಕೆ ಕುಸಿದಿದೆ. ರಸ್ತೆ ಮೇಲ್ಭಾಗದಲ್ಲಿ ಕಾಲಕಾಲಕ್ಕೆ ಡಾಂಬರು ಹಾಕುತ್ತಾ ಬರಲಾಗಿದೆಯೇ ಹೊರತು, ಅದು ಶಿಥಿಲಗೊಂಡಿರುವ ಕಡೆ ರಿಪೇರಿ ಮಾಡುವ ಕಾರ್‍ಯಕ್ಕೆ ಮುಂದಾಗದಿರುವುದೇ ಇಂದಿನ ಅವಾಂತರಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಿರುವ ಈ ರಸ್ತೆಯನ್ನು ಗಮನಿಸಿದರೆ ಭ್ರಷ್ಟಾಚಾರದ ಇಂಚಿಂಚೂ ಕಣ್ಣಿಗೆ ರಾಚುತ್ತದೆ. ಯಾವುದೇ ರಸ್ತೆ ನಿರ್ಮಾಣ ಮಾಡುವ ಮುನ್ನ ಮೊದಲು ಕಲ್ಲುಮಿಶ್ರಿತ ಮಣ್ಣನ್ನು ಹಾಕಿ ಅದರ ಮೇಲೆ ಬುಲ್ಡೋಜರ್ ಮೂಲಕ ಗಟ್ಟಿಗೊಳಿಸಬೇಕು. ನಂತರ ದಪ್ಪಜಲ್ಲಿ ಹಾಕಿ ಮೆಟ್ಲಿಂಗ್ ಮಾಡಬೇಕು.

ಆದರೆ, ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಭ್ರಷ್ಟಾಚಾರದ ಪರಿಣಾಮ ಎಲ್ಲಿಯೂ ಕಲ್ಲುಮಿಶ್ರಿತ ಮಣ್ಣು ಹಾಕಿ ಬುಲ್ಡೋಜರ್‌ನಿಂದ ಗಟ್ಟಿಗೊಳಿಸಿಲ್ಲ. ಮಾತ್ರವಲ್ಲ, ಮೆಟ್ಲಿಂಗ್ ಮಾಡುವುದಿರಲಿ ಒಂದೇ ಒಂದು ದಪ್ಪ ಜಲ್ಲಿಯನ್ನೂ ಹಾಕಿಲ್ಲ. ಇದಕ್ಕೆ ರಸ್ತೆ ಕುಸಿದಿರುವ ಸ್ಥಳವೇ ಕಣ್ಣೆದುರಿಗಿನ ಸಾಕ್ಷಿಯಾಗಿದೆ. ಆದಕಾರಣ ಬಿದ್ದ ಮಳೆ ನೀರು ನೇರವಾಗಿ ಭೂಮಿಯೊಳಗೆ ಇಳಿದಿದೆ. ಪರಿಣಾಮ, ಮರಳು ಮಿಶ್ರಿತ ಮಣ್ಣು ನೀರಿನಲ್ಲಿ ಬೆರೆತು ಇಡೀ ರಸ್ತೆ ಅಪಾಯಕ್ಕೆ ಸಿಲುಕಿ ಕುಸಿದಿದೆ.

ಕಳೆದ ಹದಿನೈದು ದಿನಗಳಲ್ಲಿ ನಾಲ್ಕು ಬಾರಿ ರಸ್ತೆ ಕುಸಿದಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರಾದರೂ ಈವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ ಸುಳಿವಿಲ್ಲದಿರವುದು ಆಡಳಿತಶಾಹಿ ವರ್ಗದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಸಾಂಸ್ಕೃತಿಕ ನಗರಿಯ ಹೆಮ್ಮೆಯ ಪ್ರತೀಕದಂತಿರುವ ಚಾಮುಂಡಿ ಬೆಟ್ಟದ ರಕ್ಷಣೆ ಇಂದಿನ ತುರ್ತು ಆದ್ಯತೆಯಾಗಿದೆ. ಆದಕಾರಣ, ಮೈಸೂರಿನ ಜನತೆ ಒಕ್ಕೊರಲಿನಿಂದ ಚಾಮುಂಡಿಬೆಟ್ಟದ ರಕ್ಷಣೆಗಾಗಿ ಕೂಗು ಹಾಕಬೇಕಾದ ಅನಿವಾರ್‍ಯತೆ ಇದೆ.

ಕೆ.ವಿ.ಮಲ್ಲೇಶ್
ಮಾಜಿ ಸದಸ್ಯರು, ಮೈಸೂರು ಮಹಾನಗರಪಾಲಿಕೆ

About Author

Leave a Reply

Your email address will not be published. Required fields are marked *