ಮೈಸೂರು ಸೇರಿ ರಾಜ್ಯದಲ್ಲಿ ಎರಡು ದಿನ ವರುಣನ ಆರ್ಭಟ!
1 min readಮೈಸೂರು ಸೇರಿದಂತೆ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೆರೆ ಕಟ್ಟೆ ಡ್ಯಾಂಗಳು ತುಂಬಿದ್ದು, ಇತ್ತ ಪಕ್ಕದ ತಮಿಳುನಾಡು ಹಾಗೂ ಆಂಧ್ರದಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ಅಕ್ಷರ ಅಹ ನಲುಗಿ ಹೋಗಿದೆ. ರಸ್ತೆಯಲ್ಲೇ ನೀರು ತುಂಬಿದ್ದು ತಮಿಳುನಾಡು ದ್ವೀಪದಂತೆ ಕಾಣಸುತ್ತಿದೆ.
ಇತ್ತ ರಾಜ್ಯದಲ್ಲಿ ನವೆಂಬರ್ ತಿಂಗಳ ದೀಪಾವಳಿ ಕಳೆದು ಇನ್ನೇನು ಚುಮು ಚುಮು ಚಳಿ ಆರಂಭವಾಗಬೇಕೆನ್ನುವಷ್ಟರಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಮನೆಯಲ್ಲಿ ಕುಳಿತು ಕಚೇರಿ ಕೆಲಸ ಮಾಡಲು ಸಾಧ್ಯವಿರುವವರು ಬಿಸಿ ಬಿಸಿ ಕಾಫಿ-ಟೀ ಹೀರುತ್ತಾ ಬೆಚ್ಚಗೆ ಮನೆಯೊಳಗಿದ್ದರೆ ಕಚೇರಿಗಳಿಗೆ, ಹೊರಗೆ ಕೆಲಸಗಳಿಗೆ ಹೋಗಬೇಕಾದವರು, ಶಾಲೆ-ಕಾಲೇಜುಗಳಿಗೆ ಹೋಗಬೇಕಾದ ಮಕ್ಕಳಿಗೆ ಮಳೆಯಲ್ಲಿಯೇ ಜರ್ಕಿನ್, ಸ್ವೆಟರ್ ಹಾಕಿಕೊಂಡು ಓಡಾಡಬೇಕಾದ ಪರಿಸ್ಥಿತಿ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 18 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಇನ್ನೂ ಮೂರು ದಿನಗಳವರೆಗೆ ಇದೇ ರೀತಿ ತುಂತುರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಜೊತೆಗೆ ಚಳಿಯೂ ಇದ್ದು ಹಲವು ಕಡೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಂಗಳೂರಲ್ಲಿ ಆರೆಂಜ್ ಅಲರ್ಟ್: ಇನ್ನು ಮೂರ್ನಾಲ್ಕು ದಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರಿಯಲಿದ್ದು ವಾಹನ ಸವಾರರು ವಾಹನ ಚಲಾಯಿಸುವಾಗ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
–ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಈ ತುಂತುರು ಮಳೆ ಉಂಟಾಗುತ್ತಿದ್ದು, ಚೆನ್ನೈ ಮಹಾನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆಯ ಅಬ್ಬರಕ್ಕೆ ತಮಿಳುನಾಡಿನಲ್ಲಿ 14 ಜನರು ಮೃತಪಟ್ಟಿದ್ದಾರೆ.
ಮುಂದಿನ 24 ಗಂಟೆಗಳ ಕಾಲ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಮೈಸೂರು ಕೂಲ್.. ಕೂಲ್..
ಸಾಂಸ್ಕೃತಿಕ ನಗರಿ ಮೈಸೂರು ಕೂಡ ಇದರಿಂದ ಹೊರತಾಗಿಲ್ಲ. ಚಾಮುಂಡಿ ಬೆಟ್ಟ ಹಿಮದಿಂದ ಕೂಡಿದ ಮಂಜಿನ ಬೆಟ್ಟವಾಗಿ ಪರಿಣಮಿಸಿದೆ. ಇತ್ತ ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಶುರುವಾದ ಮಳೆ ಇಂದು ಬೆಳಗ್ಗೆ 10 ಗಂಟೆ ವರೆಗು ಮುಂದುವರೆದಿದ್ದು, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ ಜನಜೀವನ ಅಸ್ತವ್ಯಸ್ತ ಆಗಿದ್ದು ಜನರು ಮನೆಯಿಂದ ಹೊರ ಬರಲು ಸಹ ಮೀನಾ ಮೇಷ ಎಣಿಸುತ್ತಿದ್ದಾರೆ.
ಸದ್ಯ ಇನ್ನು ಎರಡು ದಿನ ಮಳೆ ಇರಲಿದ್ದು ವಾಯುಬಾರ ಕುಸಿತದ ಎಫೆಕ್ಟ್ ನಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದಿ ಹವಾಮಾನ ಇಲಾಖೆ ತಿಳಿಸಿದೆ.