ದಸರಾ ಮಹೋತ್ಸವಕ್ಕೆ ಸಿದ್ಧತೆ: ಇಂದು 2ನೇ ಹಂತದ ಕುಶಾಲತೋಪು ತಾಲೀಮು
1 min readಮೈಸೂರು,ಅ.5-ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಭರ್ಜರಿಯಾಗಿ ಸಾಗಿದ್ದು, ಅ.7ರಂದು ಬೆಳಿಗ್ಗೆ ದಸರಾಗೆ ಚಾಲನೆ ಸಿಗಲಿದೆ. ಅದರಂತೆ ದಸರಾ ಜಂಬೂ ಸವಾರಿ ವೇಳೆ ಸಿಡಿಸುವ ಕುಶಾಲತೋಪಿಗೆ ಇಂದು ತಾಲೀಮು ನಡೆಯಿತು.
ಇಂದು 2ನೇ ಹಂತದ ತಾಲೀಮು ನಡೆಯಿತು.ಗಜಪಡೆ ಹಾಗೂ ಅಶ್ವಗಳು ಬೆದರದಂತೆ ಕುಶಾಲತೋಪು ತಾಲೀಮು ನಡೆಸಲಾಗುತ್ತದೆ.
ಅರಮನೆ ಆವರಣದಲ್ಲಿರುವ ಕೋಟೆ ಮಾರಮ್ಮನವರ ದೇಗುಲದ ಬಳಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಿತು. ಇಂದೂ ಸಹ 7 ಫಿರಂಗಿ ಗಾಡಿಗಳಿಂದ 21 ಬಾರಿ ಕುಶಾಲತೋಪುಗಳನ್ನು ಸಿಎಆರ್ ಸಿಬ್ಬಂದಿಗಳು ಸಿಡಿಸಿದರು. ಕುಶಾಲತೋಪುಗಳನ್ನು ಸಿಡಿಸುವ 2ನೇ ಹಂತದ ಇಂದಿನ ತಾಲೀಮು ಯಶಸ್ವಿಯಾಗಿದ್ದು, ಮತ್ತೊಂದು ಬಾರಿ ಕುಶಾಲತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ.
ವಿಜಯದಶಮಿ ಜಂಬೂಸವಾರಿ ಮೆರವಣಿಗೆಯ ದಿನ ರಾಷ್ಟ್ರಗೀತೆ ನುಡಿಸುವ ವೇಳೆ 21 ಬಾರಿ ಕುಶಾಲತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲು ಪೂರ್ವ ಸಿದ್ಧತೆ ನಡೆಸಲಾಗಿದೆ.
ಡಿಸಿಎಫ್ ಕರಿಕಾಳನ್ ಮಾತನಾಡಿ, ಇಂದಿನ ತಾಲೀಮಿನ ವೇಳೆ ಮೂರು ಆನೆಗಳು ಬೆದರಿವೆ. ಧನಂಜಯ, ಗೋಪಾಸ್ವಾಮಿ, ಅಶ್ವತ್ಥಾಮ ಆನೆಗಳು ಬೆದರಿವೆ. ಕಳೆದ ಬಾರಿ ಕಾಲಿಗೆ ಚೈನ್ ಅನ್ನು ಕಟ್ಟಲಾಗಿತ್ತು. ಆದರೆ ಈ ಬಾರಿ ಚೈನ್ ಅನ್ನು ಕಟ್ಟಿರಲಿಲ್ಲ. ಕಳೆದ ಬಾರಿಗಿಂತ ಈ ಬಾರಿ ಆನೆಗಳು ಧೈರ್ಯವಾಗಿವೆ. ಮುಂದಿನ ತಾಲೀಮಿನವರೆಗೆ ಸಂಪೂರ್ಣ ಧೈರ್ಯ ಬರಲಿದೆ. ವಿಕ್ರಮ್ ಆನೆ ಮದದಲ್ಲಿದೆ ಹಾಗಾಗಿ ಇಂದು ತಾಲೀಮಿನಲ್ಲಿ ಭಾಗಿಯಾಗಿಲ್ಲ. ವಿಕ್ರಮ್ ಆನೆಗೆ ಮದ ಇಳಿಯದಿದ್ದರೆ ಪಟ್ಟದ ಆನೆಗೆ ಪರ್ಯಾಯ ಆಯ್ಕೆ ಮಾಡಲಾಗುತ್ತೆ. ಧನಂಜಯ, ಗೋಪಾಲಸ್ವಾಮಿ ಆನೆಗಳು ಪರ್ಯಾಯವಾಗಿವೆ. ನೋಡಿಕೊಂಡು ಪಟ್ಟದ ಆನೆಯನ್ನು ನಿರ್ಧಾರ ಮಾಡಲಾಗುತ್ತದೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದು ತಿಳಿಸಿದರು.