ಕಾವೇರಿ ತೀರ್ಥೋದ್ಭವ, ಮಡಿಕೇರಿ ದಸರಾಗೆ ಹಲವು ನಿರ್ಬಂಧ!
1 min readಮಡಿಕೇರಿ : ದಸರಾ ಹಾಗೂ ಪವಿತ್ರ ಕಾವೇರಿ ತೀರ್ಥೋದ್ಭವದ ಸಂದರ್ಭ ಅಧಿಕ ಜನಸಂದಣಿಯಾಗುವುದನ್ನು ತಡೆಯಲು ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಮತ್ತು ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಅ.7ರಿಂದ 17ರವರೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರಿವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆದೇಶ ಹೊರಡಿಸಿದ್ದಾರೆ.
ಅದರಂತೆ ಅ.7ರಿಂದ 17ರವರೆಗೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಾದ ರಾಜಾಸೀಟ್, ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಉಳಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸ್ಯಾನಿಟೈಸರ್ ಬಳಕೆ ಇತ್ಯಾದಿ ಕೋವಿಡ್ ಸಮುಚಿತ ವರ್ತನೆಯನ್ನು ಪಾಲಿಸತಕ್ಕದ್ದು, ಈ ಬಗ್ಗೆ ಆಯಾ ಪ್ರವಾಸಿ ತಾಣಗಳ ಸಂಬಂಧಪಟ್ಟ ಇಲಾಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಅಕ್ಟೋಬರ್ ತಿಂಗಳು ಸಾಕಷ್ಟು ಸರ್ಕಾರಿ ರಜಾ ದಿನಗಳನ್ನು ಹೊಂದಿರುವುದಲ್ಲದೆ, ದಸರಾ ಹಾಗೂ ಕಾವೇರಿ ತೀರ್ಥೋದ್ಭವದಂತಹ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳನ್ನು ನಡೆಸುವ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸುವುದರ ಜೊತೆಗೆ ಅಧಿಕ ಜನಸಂದಣಿಯಾಗದಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಕೋವಿಡ್ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಅ.2ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ವಿವಿಧ ಇಲಾಖಾಧಿಕಾರಿಗಳೊಂದಿಗೆ ನಡೆಸಿದ ಪೂರ್ವಸಿದ್ದತಾ ಸಭೆಯ ತೀರ್ಮಾನದಂತೆ ಈ ಆದೇಶ ಹೊರಬಿದ್ದಿದೆ.
ದಸರಾ ಆಚರಣೆಗೂ ನಿರ್ಬಂಧ:
ಅ.7ರಂದು ಆರಂಭಗೊಳ್ಳುವ ಪ್ರಮುಖ ದೇವಾಲಯಗಳ ಕರಗಗಳಲ್ಲಿ ಪಾಲ್ಗೊಳ್ಳಲು ಪ್ರತಿ ಕರಗದಲ್ಲಿ ಗರಿಷ್ಠ 25 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಭಾಗವಹಿಸುವವರು ಕನಿಷ್ಟ 1 ಡೋಸ್ ಕೋವಿಡ್ ಲಸಿಕೆ ಮತ್ತು 72 ಗಂಟೆಗಳ ಒಳಗಿನ ಕೋವಿಡ್-19 ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಮ್ಮ ಮತ್ತೊಂದು ಆದೇಶದಲ್ಲಿ ತಿಳಿಸಿದ್ದಾರೆ.
ಕರಗ ಮನೆ ಮನೆ ಭೇಟಿಗೆ ತೆರಳುವ ಪದ್ದತಿಯ ಕಾರ್ಯಕ್ಕೆ ಗರಿಷ್ಠ 10 ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಭಾಗವಹಿಸುವವರು ಕನಿಷ್ಟ 1 ಡೋಸ್ ಕೋವಿಡ್ ಲಸಿಕೆ ಮತ್ತು 72 ಗಂಟೆಗಳ ಒಳಗಿನ ಕೋವಿಡ್-19 ಆರ್ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು ಎಂದು ಅವರು ಹೇಳಿದ್ದಾರೆ.
ಯಾವುದೇ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ,ಸರ್ಕಾರದ ಕೋವಿಡ್-19 ಸಮುಚಿತ ವರ್ತನೆ/ ಮಾರ್ಗಸೂಚಿಯನ್ನು ಪಾಲಿಸುತ್ತಾ, ದೇವಾಲಯಗಳ ಒಳಭಾಗದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ಇರುತ್ತದೆ. ಆದಾಗ್ಯೂ, ಸರ್ಕಾರ ಕಾಲಕಾಲಕ್ಕೆ ನೀಡುವ ಸುತ್ತೋಲೆ, ಮಾರ್ಗಸೂಚಿ, ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಚಾರುಲತಾ ಸೋಮಲ್ ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಪಟ್ಟ ಎಲ್ಲಾ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಮುಂತಾದವರು ಎಲ್ಲರೂ ಸಹ ಕನಿಷ್ಟ 1 ಡೋಸ್ ಕೋವಿಡ್ ಲಸಿಕೆ ಹಾಗೂ ಕನಿಷ್ಠ 72 ಗಂಟೆಗಳ ಒಳಗಿನಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಹೊಂದಿರತಕ್ಕದ್ದು. ಕಡ್ಡಾಯವಾಗಿ ಕೋವಿಡ್-19 ಸಮುಚಿತ ವರ್ತನೆಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದ ಕ್ರಮಗಳನ್ನು ಪಾಲಿಸತಕ್ಕದ್ದು ಎಂದು ತಿಳಿಸಿರುವ ಅವರು, ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಸ್ 2020, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕ್ಸಕ್ಸ್ 2005ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಎಚ್ಚರಿಸಿದ್ದಾರೆ.