ಉಪಚುನಾವಣೆ ಟಿಕೆಟ್ ಸಂಬಂಧ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಡಿ.ಕೆ. ಶಿವಕುಮಾರ್!
1 min readಬೆಂಗಳೂರು : ‘ಹಾನಗಲ್ ಉಪ ಚುನಾವಣೆ ಸಂಬಂಧ ಕಳೆದ ಎರಡು ದಿನಗಳಿಂದ ಪಕ್ಷದ ನಾಯಕರ ಜತೆ ಚರ್ಚೆ ಮಾಡುತ್ತಿದ್ದು, ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಅಭ್ಯರ್ಥಿ ಆಯ್ಕೆ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಸಮಾಲೋಚನೆಗೆ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಟಿಕೆಟ್ ಹಂಚಿಕೆ ವಿಚಾರವಾಗಿ ಪಕ್ಷದಲ್ಲಿ ಗೊಂದಲ ಮೂಡಿದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇದೆ ಎಂದು ನಿಮಗೆ (ಮಾಧ್ಯಮಗಳಿಗೆ) ಯಾರಾದರೂ ಹೇಳೀದ್ದಾರಾ? ಟಿಕೆಟ್ ಹಂಚಿಕೆ ವಿಚಾರವಾಗಿ ಸ್ಥಳೀಯ ನಾಯಕರು, ಪಕ್ಷದ ಹಿರಿಯ ನಾಯಕರ ಜತೆ ನಿರಂತರ ಚರ್ಚೆ ನಡೆಯುತ್ತಿದೆ. ಸ್ಥಳೀಯ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ಇಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಭೆ ಮಾಡುತ್ತಿದ್ದೇವೆ. ಗೊಂದಲ ಸೃಷ್ಟಿ ಮಾಡುವುದೇ ನಿಮ್ಮ ಕೆಲಸವೇ?
ಟಿಕೆಟ್ ಯಾರಿಗೆ ಎಂದು ಅಂತಿಮ ಮಾಡುವುದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಹೈಕಮಾಂಡ್. ನಮ್ಮ ಕೆಲಸ ಏನಿದ್ದರೂ ಹೆಸರು ಶಿಫಾರಸ್ಸು ಮಾಡುವುದಷ್ಟೇ.’
ಮತದಾರರು ಉತ್ತರ ನೀಡುತ್ತಾರೆ;
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಸಂಜಯ್ ಪಾಟೀಲ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆ ಕ್ಷೇತ್ರದ ಜನ ಯಾರಿಗೆ ಎಷ್ಟು ಮತ ನೀಡಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ. ಮುಂದೆಯೂ ಜನರೇ ಉತ್ತರ ನೀಡುತ್ತಾರೆ’ ಎಂದರು.