ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಧನ್ಯವಾದ
1 min readಬೆಂಗಳೂರು,ಸೆ.29- ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಮಂತ್ರಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಧನ್ಯವಾದ ತಿಳಿಸಿದ್ದಾರೆ.
ಯದುವಂಶದ ಮಹಾರಾಜರುಗಳು ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಪಸರಿಸಲು ಆ ಮೂಲಕ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಪ್ರಾರಂಭಿಸಿದ ದಸರಾ ಸರಿಸುಮಾರು 400 ವರ್ಷಗಳನ್ನು ಕಳೆದರೂ ತನ್ನ ವೈಭವವನ್ನು ಕಳೆದುಕೊಂಡಿಲ್ಲ.
ಪ್ರಥಮವಾಗಿ ವಿಜಯನಗರದ ಸಾಮ್ರಾಟ ಕೃಷ್ಣದೇವರಾಯರ ಕಾಲದಲ್ಲಿ ಪ್ರಾರಂಭಗೊಂಡ ದಸರಾ ಶ್ರೀ ರಾಜ ಒಡೆಯರ್ರವರ ಕಾಲದಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ವಿಸ್ತರಿಸಿ ಇಂದಿಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸುತ್ತಿದೆ. ರಾಜಪ್ರಭುತ್ವದ ನಂತರ ಬಂದ ಪ್ರಜಾ ಸರ್ಕಾರಗಳು ದಸರಾ ಆಚರಣೆಗೆ ಕಿಂಚಿತ್ತೂ ಚ್ಯುತಿ ಬರದ ಹಾಗೆ ಆಚರಿಸುತ್ತ ಬಂದಿರುವುದು ನಾಡಿನ ಹಿರಿಮೆಯನ್ನು ಎತ್ತಿ ಹಿಡಿದಿದೆ.
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ದೂರ ದೃಷ್ಟಿಯಿಂದ ಪ್ರತಿಷ್ಠಾಪನೆಗೊಂಡ ರೈತಾಪಿ ವರ್ಗವೇ ಆರ್ಥಿಕವಾಗಿರುವ ಮಂಡ್ಯ ಜಿಲ್ಲೆಯಿಂದ ಬಂದ ನಾನು ಈ ಬಾರಿ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ ಎಂದು ಹೇಳಿದರು.
ತಾಯಿ ಚಾಮುಂಡೇಶ್ವರಿ ಮನುಕುಲಕ್ಕೆ ಬಂದಿರುವ ಕೊರೊನಾ ಮಹಾಮಾರಿಯಿಂದ ಮುಕ್ತಿಗೊಳಿಸಿ ನಾಡು ತಮ್ಮ ನೇತೃತ್ವದಲ್ಲಿ ಮತ್ತೆ ಅಭಿವೃದ್ಧಿಯೆಡೆಗೆ ಮುನ್ನಡೆಯಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ ಹಾಗೂ ದಸರಾ ಉದ್ಘಾಟನೆಗೆ ಅವಕಾಶ ನೀಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.