ಕೆ.ಆರ್ ಕ್ಷೇತ್ರದಲ್ಲಿ ಮೋದಿ ಯುಗ್ ಉತ್ಸವ: ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
1 min readಇಂದು ಕೆ.ಆರ್ ಕ್ಷೇತ್ರದಲ್ಲಿ ಮೋದಿ ಯುಗ್ ಉತ್ಸವದ ಅಂಗವಾಗಿ ಡಿ. ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಡಿ.ದೇವರಾಜ್ ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ಹಿಂದುಳಿದ ವರ್ಗಗಳ ಸಮಾಜದ ಎಲ್ಲಾ ಗಣ್ಯರಿಗೆ ಹಾಗೂ ಕೌಟಿಲ್ಯ ರಘು ಅವರಿಗೆ ಮತ್ತು ಆಗಮಿಸಿರುವ ಬಿ.ಎಲ್.ಎ.2.ಗಳಿಗೆ ಸ್ವಾಗತಗಳು. ನಮ್ಮ ಕ್ಷೇತ್ರದಲ್ಲಿರುವ ಎಲ್ಲಾ ಸಮಾಜಗಳಿಗೆ ಏನನ್ನು ನೀಡಬೇಕಂದು ನಾವು ಯೋಚಿಸಬೇಕಾಗಿದೆ. ನಮ್ಮಲ್ಲಿರುವ ಪ್ರತಿಯೊಂದು ಸಮಾಜಕ್ಕೂ ಅದದೆ ಆದಂತಹ ವೃತ್ತಿಗಳಿವೆ ಅವರನ್ನೆಲ್ಲ ಒಗ್ಗೂಡಿಸಿ ಅವರಿಗೆ ಸರ್ಕಾರದಿಂದ ಏನನ್ನು ನೀಡಬಹುದು ಹಾಗೂ ಅವರಿಗೆ ಬೇಕಾದ ಕೌಶಲ್ಯಗಳನ್ನು ನೀಡಬಹುದೆಂದು ನಾವೆಲ್ಲ ಯೋಚಿಸಿ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ.
ಇದಾದ ಮೇಲೆ ಸಹಜವಾಗಿ 03 ನೆ ತಾರೀಖಿನಂದು ಕೇಂದ್ರದ ಸಚಿವರು ಬಂದಾಗ ಇನ್ನಷ್ಟು ಯೋಜನೆಗಳಿಗೆ ಚಾಲನೆ ನೀಡಲಿದ್ದೇವೆ. ದೇವರಾಜ ಅರಸ್ ಅವರನ್ನು ನೋಡಿದಾಗ ನಮಗೆ ಅವರ ತತ್ವ, ಆದರ್ಶಗಳನ್ನು ನೆನಪಾಗುತ್ತವೆ. ಒಬ್ಬ ಜೀವನದಲ್ಲಿ ಎಂತದೆ ಸ್ಥಾನದಲ್ಲಿದ್ದರೂ ಸಮ ಸ್ಥಿತಿಯಿಂದ ಇರಬೇಕೆಂದು ದೇವರಾಜ್ ಅರಸ್ ಅವರನ್ನು ನೋಡಿ ಕಲಿಯಬೇಕು. ನಾನು ಕಾಲೇಜಿನಲ್ಲಿದ್ದ ದಿವಸದಲ್ಲಿ ಅವರನ್ನು ಭೇಟಿಯಾಗುವ ಸದವಕಾಶ ನನಗೆ ದೊರೆತಿತ್ತು. ಅವರ ಆದರ್ಶ, ಆಶಯದಂತೆ ನಮ್ಮ ಕ್ಷೇತ್ರದ ಜನತೆಯನ್ನು ಒಂದಲ್ಲಾ ಒಂದು ಯೋಜನೆಯ ಫಲಾನವುಭಿಗಳನ್ನು ಇನ್ನೊಂದು ವರ್ಷದಲ್ಲಿ ಮಾಡುತ್ತೇವೆ. ಫ್ರಾನ್ಸ್, ಜಪಾನ್, ಜರ್ಮನಿಯಂತಹ ದೇಶದಲ್ಲಿ ಯಾವ ಕೆಲಸ ಖಾಲಿ ಇದೆ ಎಂದು ನೋಡಿ ಅಂತಹ ಕೌಶಲ್ಯವಿರುವವರನ್ನು ಬೇರೆ ದೇಶಕ್ಕೆ ಕಳುಹಿಸುವ ಕೆಲಸವನ್ನು ಒಂದು ವರ್ಷದಲ್ಲಿ ಮಾಡುವವರಿದ್ದೇವೆ ಎಂದರು.
ಡಿ.ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಘು ಕೌಟಿಲ್ಯ ಅವರು ಮಾತನಾಡಿ ಮೋದಿ ಜನ್ಮದಿನವನ್ನು ಯುಗ ಉತ್ಸವ ವಾಗಿ ಇಡೀ ರಾಷ್ಟ್ರದಲ್ಲಿಯೇ ಜನರ ಹೃದಯವನ್ನು ಮುಟ್ಟಿ ತಟ್ಟುವ ರೀತಿಯಲ್ಲಿ ಕಾರ್ಯಕ್ರಮವನ್ನ ಮಾನ್ಯ ರಾಮದಾಸ್ ಅವರು ಆಯೋಜನೆ ಮಾಡಿದ್ದಾರೆ. ಕಾಯಕವೇ ಕೈಲಾಸ ಎಂಬ ರೀತಿಯಲ್ಲಿ ರಾಮದಾಸ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಓರ್ವ ರಾಜಕಾರಣಿಗೆ ತಾಯಿ ಹೃದಯ ಇರಬೇಕು, ಯಾರಿಗೆ ತಾಯಿ ಹೃದಯ ಇರುತ್ತದೆ ಎಂದರೆ ಬಹು ಬಡತನದ ಹಿನ್ನೆಲೆಯಲ್ಲಿ ಬರಬೇಕು ಆಗ ಮಾತ್ರ ಜನರ ಕಷ್ಟಗಳು ತಿಳಿಯುತ್ತವೆ. ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಯೋಜನೆಗಳನ್ನು ಹಿಂದುಳಿದವರಿಗೆ ನೀಡಿದ್ದಾರೆ ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪನವರು ತಮ್ಮ ಅಧಿಕಾರ ಅವಧಿಯಲ್ಲಿ ನೀಡಿದ್ದಾರೆ. ಇಂತಹ ಸಾಕಷ್ಟು ಯೋಜನೆಗಳನ್ನು ಮನೆ ಮನೆ ಬಾಗಿಲಿಗೆ ರಾಮದಾಸ್ ಅವರು ನೀಡುತ್ತಿದ್ದಾರೆ. ಇಡೀ ಭಾರತದ ಇತಿಹಾಸದಲ್ಲಿ ಪ್ರಧಾನಮಂತ್ರಿ ಪದವಿಯನ್ನು ಒಬ್ಬ ಪ್ರಧಾನಸೇವಕ ನರೇಂದ್ರಮೋದಿ ಏರಿದ್ದಾರೆ ಇವತ್ತು ಶಾಸಕ ಪದವಿಗೆ ರಾಮದಾಸ್ ಅವರು ಗೌರವವನ್ನು ನೀಡಿದ್ದಾರೆ. ನಮ್ಮ ಇಲಾಖೆಯ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಕೆ.ಆರ್ ಕ್ಷೇತ್ರದ ಫಲಾನುಭವಿಗಳಿಗೆ ತಲುಪಲಿ ಎಂದು ನಾನು ಕೂಡಾ ಸಹಕಾರ ನೀಡುತ್ತೇನೆ. ನಮ್ಮ ದೇಶದ ಸಾಂಪ್ರದಾಯಿಕ ವಸ್ತುಗಳಿಗೆ ಹೊಸತನದ ರೂಪ ನೀಡಬೇಕಿದೆ ಆ ದಿಕ್ಕಿನಲ್ಲಿ ಇಡೀ ಕೆ.ಆರ್ ಕ್ಷೇತ್ರ 21 ನೆ ಶತಮಾನದಲ್ಲಿ ಸ್ವಾವಲಂಬಿ ದೇಶ ನಿರ್ಮಾಣದಲ್ಲಿ ಭಾಗಿಯಾಗಿ ಇಡೀ ದೇಶ ತಿರುಗಿ ನೋಡುವಂತೆ ಆಗಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ನಿಗಮದಿಂದ ಮಂಜೂರಾಗಿರುವ ಸಾಲದ ಪತ್ರವನ್ನು ವಿತರಣೆ ಮಾಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಘು ಕೌಟಿಲ್ಯ, ಪ್ರಕಾಶ್, AGM ದೇವರಾಜು ಅರಸು ನಿಗಮ , , ಕೆ.ಆರ್ ಕ್ಷೇತ್ರದ ಭಾಜಪಾ ಅಧ್ಯಕ್ಷರಾದ ಎಂ.ವಡಿವೇಲು, ಪ್ರಧಾನಕಾರ್ಯದರ್ಶಿಗಳಾದ ನಾಗೇಂದ್ರ ಕುಮಾರ್, ಆಶ್ರಯ ಸಮಿತಿ ಉಪಾಧ್ಯಕ್ಷರಾದ ಶ್ರೀಮತಿ ವಿದ್ಯಾ ಅರಸ್ , ಬಿ.ಎಲ್.ಎ.1 ಪ್ರಸಾದ್ ಬಾಬು, ಪ್ರಮುಖರಾದ ಶಿವಪ್ಪ, ಬಂಗಾರಿ ಸುರೇಶ್, ಗಾಣಿಗ, ಬೆಸ್ತ, ಈಡಿಗ, ಮಾದಿಗ, ಕುರುಬ , ಆರ್ಯ ವೈಶ್ಯ ಹಾಗೂ ಇನ್ನಿತರ ಸಮಾಜಗಳ ಪ್ರಮುಖರುಗಳು ಹಾಜರಿದ್ದರು.