ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಸಚಿವ ಅರಗ ಜ್ಞಾನೇಂದ್ರ

1 min read

ಮೈಸೂರು,ಸೆ.28-ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೪ ವರ್ಷದ ಹಿಂದೆ ೩೩ ಸಾವಿರ ಹುದ್ದೆಗಳು ಖಾಲಿ ಇದ್ದವು . ಆದರೆ ಈಗ ೧೬ ಸಾವಿರ ಹುದ್ದೆಗಳು ಖಾಲಿ ಇವೆ. ಈ ಬಾರಿ ೪ ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇನ್ನೆರಡು ವರ್ಷದಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿಮಾಡಲಾಗುವುದು ಎಂದರು.
ಮೈಸೂರು ನಗರದಲ್ಲಿ ೧೩೪ ಕಾನ್ಸ್‌ಟೇಬಲ್ ಗಳ ಹುದ್ದೆ ಖಾಲಿ ಇದ್ದು, ಈ ಬಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಅಲ್ಲದೇ ಶೇ. ೨೫ ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲು ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದರು.
೩೬ ಮಹಿಳಾ ಪೊಲೀಸ್ ಠಾಣೆಗಳಿದ್ದು, ಪ್ರತಿ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಠಾಣೆ ಸ್ಥಾಪಿಸಲಾಗಿದೆ. ಪ್ರತಿ ಠಾಣೆಯಲ್ಲಿ ೩ ಮಂದಿ ಮಹಿಳಾ ಕಾನ್ಸ್‌ಟೇಬಲ್ ಇರಬೇಕೆಂದು ಆದೇಶಿಸಲಾಗಿದೆ. ಅಲ್ಲದೇ ಮಹಿಳೆಯರು ಹಾಗೂ ಯುವತಿಯರ ಹಿತದೃಷ್ಟಿಯಿಂದ ಪ್ರತಿ ಠಾಣೆಯಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗುತ್ತಿದೆ. ಯುವತಿಯರು ಹಾಗೂ ವಿದ್ಯಾರ್ಥಿಗಳಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ‌ ಮೇಲಿನ ದೌರ್ಜನ್ಯ ತಡೆಗಟ್ಟುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.
ಆರೋಪಿಗಳಿಗೆ ಶಿಕ್ಷೆ ಕೊಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ ಪಾತ್ರ ಮಹತ್ವದ್ದಾಗಿದ್ದು, ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಪ್ರಮುಖವಾಗಿದೆ. ಈ ಕಾರಣದಿಂದಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ೨೫೦ ಮಂದಿ ಸಿಬ್ಬಂದಿಗಳ‌ ನೇಮಕವನ್ನು ಮಂಜೂರಾತಿಗಾಗಿ ನೀಡಿದ್ದೇವೆ ಎಂದು ಹೇಳಿದರು.
100 ಪೊಲೀಸ್ ಠಾಣೆಗಳ ನಿರ್ಮಾಣ:
ಪೊಲೀಸ್ ಠಾಣೆಗಳು ಹೆಚ್ಚಾಗಿ ಬಾಡಿಗೆ ಕಟ್ಟಡದಲ್ಲಿ‌ ಇದೆ. ಆದ್ದರಿಂದ ರಾಜ್ಯದಲ್ಲಿ ೨೦೦ ಕೋಟಿ ರೂ. ವೆಚ್ಚದಲ್ಲಿ ೧೦೦ ಪೊಲೀಸ್ ಠಾಣೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಸ್ವಂತ ಕಟ್ಟಡವಿಲ್ಲದ ೧೩ ಪೊಲೀಸ್ ಠಾಣೆಗಳು ಮಾತ್ರ ಉಳಿದುಕೊಳ್ಳುತ್ತವೆ. ಇದೇ ವೆಚ್ಚದಲ್ಲಿ ಆ ಠಾಣೆಗಳಿಗು ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗೆ ೧೦ ಸಾವಿರ ಮನೆ ಅನುಷ್ಠಾನ:
ಪ್ರಸ್ತುತ ಶೇ.೪೯ ರಷ್ಟು ಪೊಲೀಸರಿಗೆ ಮನೆ ನೀಡಲಾಗಿದ್ದು, ಉಳಿದ ಪೊಲೀಸ್ ಸಿಬ್ಬಂದಿಗಳಿಗೆ ೧೦ ಸಾವಿರ ಮನೆಗಳ ನಿರ್ಮಾಣಕ್ಕೆ ಅನುಷ್ಟಾನ ಮಾಡಿದ್ದೇವೆ ಎಂದು ತಿಳಿಸಿದರು.
ಸದ್ಯದಲ್ಲಿಯೇ ಮತಾಂತರ‌ ನಿಷೇಧ ಕಾಯ್ದೆ ಜಾರಿ:
ಸದ್ಯದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತದೆ. ‌ಅವರವರ ಧರ್ಮದಲ್ಲಿ ಅವರು ಬದುಕಬೇಕು. ಮತಾಂತರ ಮಾಡುವುದು ತಪ್ಪು. ಈ ಹಿನ್ನೆಲೆಯಲ್ಲಿ ವಿವಿಧ ಕಾಯ್ದೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು ಎಂದರು.
ಜೂಜು ನಿಲ್ಲಿಸುವುದಕ್ಕೆ ಕಾಯ್ದೆ ಜಾರಿಗೆ:
ಈಗಾಗಲೇ ರಾಜ್ಯದಲ್ಲಿ ಜೂಜಾಡುವುದನ್ನು ನಿಲ್ಲಿಸಲು ಕಾಯ್ದೆ ಜಾರಿಗೆ ತರಲಾಗಿದೆ. ಹಣ ಇಟ್ಟು ಆಡುವ ಎಲ್ಲಾ ಜೂಜುಗಳನ್ನು ನಿಷೇಧಿಸಲಾಗಿದೆ. ಬೆಟ್ಟಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ನಿಷೇಧ ಮಾಡಲು ವೆಬ್ ಸೈಟ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಇದರ ಮಾಹಿತಿ ಸೈಬರ್ ಪೊಲೀಸರಿಗೆ ಇದೆ ಎಂದರು.

About Author

Leave a Reply

Your email address will not be published. Required fields are marked *