ಹಕ್ಕುಗಳಿಗಾಗಿ ಜಾತಿ ಸಮಾವೇಶ ನಡೆಸುವುದು ಅಪರಾಧವಲ್ಲ: ಸಿದ್ದರಾಮಯ್ಯ
1 min readಬೆಂಗಳೂರು,ಸೆ.25-ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮಡಿವಾಳರ ಸಂಘ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಕೊರೊನಾದಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು.
ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ.
ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ ತಪ್ಪಲ್ಲ. ಹಿಂದುಳಿದವರೇ ಸಂಘಟಿತರಾಗಿ ಸಮ್ಮೇಳನ ಮಾಡಬೇಕು.
ಕೆಲವರು ಹೆಸರಿಗೆ ಮಾತ್ರ ಬಸವಣ್ಣನ ಹೆಸರು ಹೇಳುತ್ತಾರೆ. ಆದರೆ, ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಾರೆ. ಇವನಾರವ ಇವನಾರವ, ಇವ ನಮ್ಮವ ಇವ ನಮ್ಮವ ಎಂದು ವಚನ ಹೇಳುತ್ತಾರೆ. ಆದರೆ, ಪಕ್ಕದಲ್ಲಿ ನಿಂತು ನೀವು ಯಾವ ಜಾತಿ ಎಂದು ಕೇಳುತ್ತಾರೆ. ಸಂವಿಧಾನ ಅತ್ಯಂತ ಒಳ್ಳೆಯದು. ಆದರೆ ಸಂವಿಧಾನ ಒಳ್ಳೆಯವರ ಕೈಯಲ್ಲಿರಬೇಕು. ಆಗ ಜನರಿಗೆ ಅನುಕೂಲವಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿದ್ದ ಜಾತಿ ಸಮೀಕ್ಷೆ ವರದಿ ನಾನು ಸಿಎಂ ಆಗಿದ್ದಾಗ ಪೂರ್ಣಗೊಂಡಿರಲಿಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಪೂರ್ಣವಾಯ್ತು. ಆಗ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದರು. ವರದಿ ಪೂರ್ಣವಾಗಿದೆ ಎಂದು ಅವರು ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಿದರು. ಆದರೆ, ವರದಿ ಬಿಡುಗಡೆ ಮಾಡಲು ಅವರಿಗೆ ಅವಕಾಶ ಕೊಡಲಿಲ್ಲ. ಪುಟ್ಟರಂಗಶೆಟ್ಟಿ ಅವರನ್ನು ಹೆದರಿಸಿದ ಕುಮಾರಸ್ವಾಮಿಯವರು ವರದಿ ಬಿಡುಗಡೆ ಮಾಡಿಸಲಿಲ್ಲ.
ಕುಮಾರಸ್ವಾಮಿಯವರಿಗೆ ಹೆದರಿ ಪುಟ್ಟರಂಗಶೆಟ್ಟಿ ವರದಿ ಬಿಡುಗಡೆ ಮಾಡುವ ಗೋಜಿಗೆ ಹೋಗಲಿಲ್ಲ.
ಇದ್ದುದನ್ನು ಇದ್ದಹಾಗೆ ಹೇಳಿದರೆ ಕುಮಾರಸ್ವಾಮಿಯವರಿಗೆ ಕೋಪ. ಸಿದ್ದರಾಮಯ್ಯ ಕೂತು ವರದಿ ಬರೆಸಿಬಿಟ್ಟಿದ್ದಾನೆ ಎನ್ನುತ್ತಾರೆ ಅವರು.
ಅದು ಎಲ್ಲ ಜಾತಿ, ಜನಾಂಗದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಅರಿಯುವ ವರದಿ. ಯಾರಿಗೂ ಅನ್ಯಾಯ ಮಾಡುವ ಉದ್ದೇಶ ಇಲ್ಲ.ಆದರೂ ವರದಿಗೆ ವಿರೋಧ ವ್ಯಕ್ತಪಡಿಸುತ್ತಾರೆ.
ಮುಂದಿನ ಬಾರಿ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆಗ ಮಡಿವಾಳ ಸಮಾಜಕ್ಕೆ ಎಂಎಲ್ಸಿ ಸ್ಥಾನ ನೀಡುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.