ದಸರಾ ಮಹೋತ್ಸವ: ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳ ನಿಗದಿ

1 min read

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಅರಮನೆಯಲ್ಲಿ ಸಾಂಪ್ರದಾಯಿಕ ದಸರಾ ಸಂಭ್ರಮ ಮನೆ ಮಾಡಿದ್ದು ಅರಮನೆಯ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನ ನಿಗದಿ ಮಾಡಲಾಗಿದೆ.

ಕೊರೋನಾ ಹಿನ್ನೆಲೆ ಈ ಬಾರಿಯೂ ಪಾರಂಪರಿಕ ಜಟ್ಟಿ‌ ಕಾಳಗ ರದ್ಧುಗೊಳಿಸಲಾಗಿದೆ. ಕಳೆದ ಬಾರಿಯೂ ಜಟ್ಟಿ ಕಾಳಗವನ್ನ ರದ್ದುಗೊಳಿಸಲಾಗಿತ್ತು.

ಸದ್ಯ ಅರಮನೆಯಲ್ಲಿ ಅಕ್ಟೋಬರ್ 1ಕ್ಕೆ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 1ರಂದು ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಅ 7 ರಿಂದ 14ರವರೆಗೂ ಅರಮನೆಯಲ್ಲಿ ದಸರಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರವರೆಗೆ ಅರಮನೆಗೆ ಮಧ್ಯಾಹ್ನ 2.30ರವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಅಕ್ಟೋಬರ್ 7ರಿಂದ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಯಲಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನ ಏರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ 14 ಅರಮನೆಯಲ್ಲಿ ಆಯುಧಪೂಜೆ ನಡೆಯಲಿದ್ದು, ಬೆಳಗ್ಗೆ 5.30ರಿಂದ ಪೂಜಾ ವಿಧಿ ವಿಧಾನ ಆರಂಭವಾಗಲಿದೆ. ಬೆಳಿಗ್ಗೆ 7.45ಕ್ಕೆ ರಾಜರ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಮಾಡಿ, ನಂತರ ಪೂಜೆ ಸಲ್ಲಿಸಿ ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆ ಕಲ್ಯಾಣಮಂಟಪಕ್ಕೆ ತರಲಾಗುತ್ತದೆ.

ಬೆಳಿಗ್ಗೆ 11.02 ರಿಂದ 11.22ರ ಶುಭ ಮುಹೂರ್ತದಲ್ಲಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪೂಜೆ ಸಲ್ಲಿಸಲಿದ್ದಾರೆ. ಆಗಸ್ಟ್ 15ರಂದು ಅರಮನೆಯಲ್ಲಿ ವಿಜಯದಶಮಿ ಆಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 5.45ಕ್ಕೆ ಅರಮನೆ ಆನೆ ಕುದುರೆ ಹಸುಗಳು ಆಗಮಿಸಲಿದ್ದು, 6.13 ರಿಂದ 6.32ರವರೆಗೆ ಪೂಜಾ ಕೈಂಕರ್ಯ ನೆರವೇರಲಿದೆ.

7.20ರಿಂದ 7.40ರವರೆಗೆ ವಿಜಯದಶಮಿ‌ ಮೆರವಣಿಗೆ ನಡೆಯಲಿದ್ದು, ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ಬಳಿಕ ದೇಗುಲದ ಬನ್ನಿ ಮರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅಕ್ಟೋಬರ್ 31ರಂದು ಸಿಂಹಾಸನ ವಿಂಗಡಿಸಿ ಖಜಾನೆಗೆ ರವಾನೆ ಮಾಡಲಾಗುತ್ತದೆ ಅಂದು ಸಹ ಮಧ್ಯಾಹ್ನ 1.30ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ.

About Author

Leave a Reply

Your email address will not be published. Required fields are marked *