ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಬೇಡಿ: ರೈತ ಸಂಘದ ಒತ್ತಾಯ
1 min readಮೈಸೂರು,ಸೆ.24:ಮೈಸೂರು ಮೈಶುಗರ್ ಕಂಪನಿ ಎಂದು ಪ್ರಸಿದ್ಧವಾಗಿರುವ ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ನಗರ ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎನ್.ನಂಜೇಗೌಡ ಮಾತನಾಡಿ, ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರ್ಕಾರದ ಸ್ವಾಮ್ಯದಲ್ಲೇ ಕಾರ್ಖಾನೆಯನ್ನು ಮುನ್ನಡೆಸಬೇಕು ಎಂದರು.
ಸುಮಾರು 1600ಕೋಟಿ ರೂ.ಗಳ ಆಸ್ತಿ ಹೊಂದಿರುವ ಈ ಕಾರ್ಖಾನೆ 1933 ಡಿ. 15ರಿಂದ ಕಬ್ಬು ಅರೆಯಲು ಪ್ರಾರಂಭಿಸಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸಕ್ತಿ. ಅಂದಿನ ಇಂಗ್ಲಿಷ್ ಅಧಿಕಾರಿ ಡಾ.ವೆಸ್ಲಿ ಕೋಲ್ಮನ್ ರವರ ಶ್ರಮದ ಫಲವಾಗಿ ಪ್ರಾರಂಭಿಸಲಾದ ಕಾರ್ಖಾನೆ. ಮಂಡ್ಯ ಜಿಲ್ಲೆ ರೈತರ ಜೀವನಾಡಿ ಸ್ವಾಭಿಮಾನದ ಸಂಕೇತವಾದ ಈ ಕಾರ್ಖಾನೆ ಕರ್ನಾಟಕ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಆದರ್ಶ. ಮಾದರಿಯಾಗಿದೆ ಎಂದರು.
ಈ ಕಾರ್ಖಾನೆಯನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದ್ದು ರಾಜ್ಯ ಸರ್ಕಾರದ ಈ ನಿಲುವನ್ನು ಖಂಡಿಸಿ ಹೋರಾಟ ಮಾಡಲು ರಾಜ್ಯ ರೈತ ಸಂಘ ನಿರ್ಧರಿಸಿದೆ ಎಂದು ತಿಳಿಸಿದರು.