ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಸಂತ್ರಸ್ತೆ
1 min readಬೆಂಗಳೂರು/ಮೈಸೂರು,ಸೆ.22 –ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ರಸ್ತೆಯಲ್ಲಿ ವಿಧ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಪ್ರಕರಣದ ಸಂತ್ರಸ್ತೆ ನ್ಯಾಯಾಲಯಕ್ಕೆ 164 ಸ್ಟೇಟ್ ಮೆಂಟ್ ನೀಡಿದ್ದಾಳೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರಿನ ರೇಪ್ ಕೇಸ್ ಕುರಿತಂತೆ ಇಂದು ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತ್ರಸ್ತೆ ನ್ಯಾಯಾಲಯ ಮತ್ತು ತನಿಖಾಧಿಕಾರಿಗೆ ಸ್ಟೇಟ್ ಮೆಂಟ್ ನೀಡಿರುವುದನ್ನು ತಿಳಿಸಿದರು.
ಮೈಸೂರಿನ ಪೋಲಿಸರು ಮುಂಬೈಗೆ ಹೋಗಿ ಎರಡು ಕ್ಯಾಮರಾಗಳನ್ನು ಅಳವಡಿಸಿ ವಿಡಿಯೋ ಕಾನ್ಫೆರೆನ್ಸ್ಗೆ ವ್ಯವಸ್ಥೆ ಮಾಡಿದರು. ಮೈಸೂರಿನ 3ನೇ ಜೆಎಂಎಫ್‌ಸಿ ನ್ಯಾಯಾಯದಲ್ಲಿ ನ್ಯಾಯಾಧೀಶರ ಮುಂದೆ ಸಂತ್ರಸ್ತೆಯು ಪ್ರಕರಣದ ಬಗ್ಗೆ ಹೇಳಿಕೆ ನೀಡಿದಳು. ಸುಮಾರು 45 ನಿಮಿಷಗಳ ಕಾಲ ನೀಡಿದ ಹೇಳಿಕೆಯನ್ನು ನ್ಯಾಯಾಧೀಶರು ಹಾಗೂ ಪೋಲಿಸ್ ತನಿಖಾಧಿಕಾರಿಗಳು ಟೈಪಿಸ್ಟ್ ಮೂಲಕ ದಾಖಲಿಸಿದರು. ನಂತರ ಆ ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರವಾಗಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರಿಗೆ ಸಂತ್ರಸ್ತೆ ನೀಡುವ ಹೇಳಿಕೆ ಬಹಳ ಮುಖ್ಯವಾಗಿತ್ತು. ಇಲ್ಲದಿದ್ದಲ್ಲಿ ಪ್ರಕರಣ ನ್ಯಾಯಾಲಯದಲ್ಲಿ ತನ್ನ ಗಟ್ಟಿತನ ಕಳೆದುಕೊಳ್ಳುತ್ತದೆ ಎನ್ನುವುದು ಖಚಿತವಾಗಿತ್ತು. ಸಂತ್ರಸ್ತ ಯುವತಿ ನಾನು ಹೇಳಿಕೆ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಳು. ಆದರೆ ಮೈಸೂರು ಪೊಲೀಸರು ತಪ್ಪಿತಸ್ಥರಿಗೆ ದಂಡನೆ ಆಗಲೇಬೇಕೆಂದು ಹಠಕ್ಕೆ ಬಿದ್ದು ಸಂತ್ರಸ್ತೆಯನ್ನು ಪತ್ತೆ ಹಚ್ಚಿ 164 ಹೇಳಿಕೆ ಪಡೆದಿದ್ದಾರೆ. ಈಗ ನ್ಯಾಯಾಲಯಕ್ಕೆ ಹೇಳಿಕೆ ನೀಡಿರುವ ಕಾರಣ ಈ ಪ್ರಕರಣ ಮತ್ತಷ್ಟು ಗಟ್ಟಿಯಾಗಿದ್ದು, ಪೋಲಿಸರು ನಿಟ್ಟುಸಿರು ಬಿಟ್ಟಿದ್ದಾರೆ.
ಸಂತ್ರಸ್ತೆ ಹೇಳಿಕೆ ನೀಡುವುದೇ ಇಲ್ಲ ಎಂದು ಹೇಳಲಾಗಿತ್ತು. ಆದರೆ ೨೮ ದಿನದ ನಂತರ ಸಂತ್ರಸ್ತೆ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ. ಯುವತಿಯ ಹೇಳಿಕೆಯಿಂದ ಅತ್ಯಾಚಾರಿಗಳಿಗೆ ಶಿಕ್ಷೆ ಖಚಿತ ಎನ್ನಲಾಗಿದೆ.