ವಾಣಿಜ್ಯ ತೆರಿಗೆ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಕರೆ: ಕೆಲಕಾಲ ಆತಂಕ

1 min read

ಮೈಸೂರು,ಸೆ.22-ಮೈಸೂರು ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ. ಬಾಂಬ್ 12 ಗಂಟೆಗೆ ಸ್ಫೋಟಗೊಳ್ಳುವುದು ಎಂದು ಬಂದ ಹುಸಿ ಬಾಂಬ್ ಬೆದರಿಕೆ ಕರೆಯಿಂದ‌ ಕೆಲಕಾಲ ಆತಂಕ ಮನೆ ಮಾಡಿತ್ತು.
ನಗರದ ದೇವರಾಜ ಮೊಹಲ್ಲಾದ ಬಿಡಾರಾಂ ಕೃಷ್ಣಪ್ಪ ರಸ್ತೆಯಲ್ಲಿರುವ ಕಚೇರಿಗೆ ಬೆದರಿಕೆ ಪತ್ರ ಬಂದಿದ್ದು, ಇದರಿಂದ ಆತಂಕಗೊಂಡ ಸಿಬ್ಬಂದಿ, ಅಧಿಕಾರಿಗಳು ಹೆದರಿ ಹೊರಗೆ ಓಡಿ ಬಂದಿದ್ದಾರೆ.
ವಿಷಯ ತಿಳಿದ ಪೊಲೀಸರು ತಕ್ಷಣ ಬಾಂಬ್ ನಿಷ್ಕ್ರಿಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ನಂತರ ಅದು ಹುಸಿ ಬಾಂಬ್ ಕರೆ ಎಂದು ತಿಳಿದಿದೆ.


ಕಚೇರಿ ಸುತ್ತಮುತ್ತ ಇದ್ದ ಸಾರ್ವಜನಿಕರನ್ನು ಪೊಲೀಸರು ದೂರ ಪ್ರದೇಶಕ್ಕೆ ಕಳುಹಿಸಿದ್ದಾರೆ. ಕಚೇರಿ  ರಸ್ತೆಯ ಎರಡೂ ಕಡೆಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ.
ನಮ್ಮ ಕಚೇರಿಗೆ ಬೆದರಿಕೆ ಕರೆ ಬಂದಿಲ್ಲ. ಪೊಲೀಸರಿಗೆ ನೇರವಾಗಿ ಬಾಂಬ್ ಇರಿಸಿರೋದಾಗಿ ಕರೆ ಮಾಡಿ ದುಷ್ಕರ್ಮಿಗಳು ತಿಳಿಸಿದ್ದಾರೆ. ಕಾನ್ಸ್‌ಟೇಬಲ್ ಒಬ್ಬರು ಬಂದು ನನಗೆ ಮೆಸೇಜ್ ತೋರಿಸಿದರು. ಅದರಲ್ಲಿದ್ದ ವಿಳಾಸ ಹಾಗೂ ಅಕ್ಕಪಕ್ಕದ ಕಚೇರಿಗಳ ಹೆಸರು ನೋಡಿ ಖಾತರಿ ಮಾಡಿಕೊಂಡೆ. ಬೆಳಿಗ್ಗೆ 11.30ರ ಸುಮಾರಿಗೆ ಬಂದು ತಿಳಿಸಿದರು. ಆಗ ತಕ್ಷಣ ಮೀಟಿಂಗ್ ಬಿಟ್ಟು ನಾವು ಹೊರಗೆ ಬಂದೆವು. ಕಚೇರಿಯಲ್ಲಿ ಸುಮಾರು‌ 80 ಮಂದಿ ಸಿಬ್ಬಂದಿ ಇದ್ದರು ಎಂದು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದ್ದಾರೆ.


ಲಕ್ಷ್ಮೀಪುರಂ ನಲ್ಲಿರುವ ಆಡಿಟರ್ ಕಚೇರಿ ಗೇಟ್ ನಲ್ಲಿ ಪತ್ರ ಸಿಕ್ಕಿದ್ದು, ಪತ್ರದಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆ ಒಳಗೆ ಕಚೇರಿಯಲ್ಲಿ ಸ್ಫೋಟವಾಗುವ ಬಗ್ಗೆ ಬೆದರಿಕೆಯೊಡ್ಡಲಾಗಿದೆ.  ಸ್ಥಳಕ್ಕೆ ಡಿಸಿಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿಪಿ, ವಾಣಿಜ್ಯ ತೆರಿಗೆ ಕಚೇರಿ ಕಟ್ಟಡದ ಆವರಣದಲ್ಲಿದ್ದ ಲಾರಿ ಹಾಗೂ ವಾಹನಗಳನ್ನು ಹೊರಕ್ಕೆ ಕಳುಹಿಸಿದ್ದಾರೆ.
ನಗರದ ಬಿಡಾರಾಂ ಕೃಷ್ಣಪ್ಪ ರಸ್ತೆಯಲ್ಲಿರುವ ರಾಜ್ಯ ಸರಕು‌ ಮತ್ತು ಸೇವಾ ತೆರಿಗೆ ಆಯುಕ್ತರ ಕಚೇರಿಯಲ್ಲಿ ಪೊಲೀಸರಿಂದ ಕಚೇರಿ ಆವರಣದಲ್ಲಿ ತೀವ್ರ ಶೋಧ ಕಾರ್ಯ ನಡೆದಿದೆ. ಬಾಂಬ್ ಸ್ಕ್ವಾಡ್ ಮತ್ತು ಪೊಲೀಸರು ವಾಣಿಜ್ಯ ತೆರಿಗೆ ಕಚೇರಿಯಲ್ಲಿ ತಪಾಸಣೆ ನಡೆಸಿದ್ದಾರೆ.  ಪತ್ರ ಬರೆದಿದ್ದು ಯಾರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

About Author

Leave a Reply

Your email address will not be published. Required fields are marked *