ನಂಜನಗೂಡು ಗ್ರಾಮಾಂತರ ಠಾಣೆ, ಹುಣಸೂರಿನ ಒಟ್ಟು 12 ಪ್ರಕರಣ ಭೇದಿಸಿದ ಪೊಲೀಸರು: 6 ಮಂದಿಯ ಬಂಧನ
1 min readಮೈಸೂರು,ಜ.19-ನಂಜನಗೂಡು ಗ್ರಾಮಾಂತರ ಠಾಣೆಯ ಹಾಗೂ ಹುಣಸೂರಿನ ಒಟ್ಟು 12 ಪ್ರಕರಣಗಳಲ್ಲಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ಹೊರಡಿಸಿದೆ. ಜ.14 ರಂದು ನಂಜನಗೂಡು ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಇಬ್ಬರು ಮೋಟಾರ್ ಸೈಕಲ್ ನಲ್ಲಿ ಹೆಗ್ಗಡಹಳ್ಳಿ ಕಡೆಯಿಂದ ನಂಜನಗೂಡು ಕಡೆಗೆ ಬರುತ್ತಿದ್ದರು. ಅವರನ್ನು ವಿಚಾರಣೆ ಮಾಡಿದಾಗ ಇವರು ಜ.7 ರಂದು ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದಲ್ಲಿ 4 ಹಸು ಮತ್ತು ಒಂದು ಕರು, ಬಸವನಪುರ, ಹೆಬ್ಯಾ, ಅಡಕನಹಳ್ಳಿ ಹುಂಡಿ ಗ್ರಾಮಗಳಲ್ಲಿ ಹಾಗೂ ಮೈಸೂರು ತಾಲೂಕು ಕೂಡನಹಳ್ಳಿ ಗ್ರಾಮ, ಬಸಳ್ಳಿ ಹುಂಡಿ ಗ್ರಾಮಗಳಲ್ಲಿ ಹಸುಗಳನ್ನು ಕಳ್ಳತನ ಮಾಡಿರುವುದು ತಿಳಿದುಬಂದಿದೆ.
ಆರೋಪಿಗಳಿಂದ 10 ಹೆಚ್.ಎಫ್ ತಳಿಯ ಹಸುಗಳು, 2 ನಾಡ ಹಸುಗಳು, 1 ಕರು, 1 ಮೋಟಾರ್ ಸೈಕಲ್, 1 ಟಾಟಾ ಏಸ್ ವಾಹನ ವಶಪಡಿಸಿಕೊಳ್ಳಲಾಗಿದೆ. ನಂಜನಗೂಡು ಗ್ರಾಮಾಂತರ ಠಾಣೆಯ 4 ಪ್ರಕರಣಗಳು ಮತ್ತು ವರುಣಾ ಠಾಣೆಯ 1 ಪ್ರಕರಣ ಒಟ್ಟು 5 ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಅಂದಾಜು ಮೊತ್ತ 7,85,000 ರೂ.ಗಳಾಗಿರುತ್ತದೆ.
ಪ್ರಕರಣದ ಪತ್ತೆಗೆ ಪೊಲೀಸ್ ಅಧೀಕ್ಷಕರಾದ ಆರ್.ಚೇತನ್, ಅಪರ ಪೊಲೀಸ್ ಅಧೀಕ್ಷರಾದ ಆರ್.ಶಿವಕುಮಾರ್, ನಂಜನಗೂಡು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗೋವಿಂದರಾಜು ಅವರ ಮಾರ್ಗದರ್ಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿವನಂಜಶೆಟ್ಟಿ, ಪಿಎಸ್ಐ ಕೆ.ಎ.ಚಂದ್ರ, ಸಿಬ್ಬಂದಿಗಳಾದ ಕೃಷ್ಣ, ಹರೀಶ್, ಮಹೇಶ್, ಚೇತನ್, ಕೃಷ್ಣ ಅವರುಗಳ ಕಾರ್ಯವನ್ನು ಆರ್.ಚೇತನ್ ಅವರು ಶ್ಲಾಘಿಸಿದ್ದಾರೆ.
ಇನ್ನು 2021ರ ಡಿಸೆಂಬರ್ 26 ರಂದು ಹುಣಸೂರು ಪಟ್ಟಣ ಠಾಣಾ ಸರಹದ್ದು ಹಾಲಗೆರೆ ಜಂಕ್ಷನ್ ಬಳಿ ಮೈಸೂರಿನಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರಿಗೆ ದ್ವಿಚಕ್ರ ವಾಹನದ ಸವಾರನೊಬ್ಬ ಕಾರಿನ ಹಿಂಬದಿಯ ಬಂಪರ್ ಗೆ ಡಿಕ್ಕಿ ಹೊಡೆದು, ಕಾರನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿ, ಹುಣಸೂರು ಪಟ್ಟಣದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ, ಕಾರಿನ ಚಾಲಕನನ್ನು ಅಪಹರಣ ಮಾಡಿ ಆತನಿಂದ 17,000 ರೂ. ಹಣ ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿದ್ದು, ಈ ಸಂಬಂಧ ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆ ಬಗ್ಗೆ ಪೊಲೀಸ್ ಅಧೀಕ್ಷರಾದ ಆರ್.ಚೇತನ್ ಅವರ ಸೂಚನೆಯಂತೆ ಹಾಗೂ ಅಪರ ಪೊಲೀಸ್ ಅಧೀಕ್ಷಕರು ಆರ್.ಶಿವಕುಮಾರ್, ಹುಣಸೂರು ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪಿ.ರವಿಪ್ರಸಾದ್ ಅವರ ಮಾರ್ಗದರ್ಶನದಂತೆ ಹುಣಸೂರು ಪಟ್ಟಣ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿ.ವಿ.ರವಿ ಅವರ ನೇತೃತ್ವದ ವಿಶೇಷ ತಂಡ 4 ಆರೋಪಿಗಳನ್ನು ಬಂಧಿಸಿ, ಹುಣಸೂರು ಪಟ್ಟಣ ಠಾಣೆಯ ದರೋಡೆ ಪ್ರಕರಣ, ಮೋಟಾರ್ ಬೈಕ್ ಕಳವು ಹಾಗೂ ಇತರೆ 2 ದನ ಕಳ್ಳತನ ಮತ್ತು ಬಿಳಿಕೆರೆ ಠಾಣಾ ವ್ಯಾಪ್ತಿಯ 3 ದನ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 7 ಪ್ರಕರಣಗಳನ್ನು ಭೇದಿಸಲಾಗಿದೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಹುಣಸೂರು ಪಟ್ಟಣ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿ.ವಿ.ರವಿ, ಪೊಲೀಸ್ ಸಿಬ್ಬಂದಿಗಳಾದ ಪುಟ್ಟನಾಯಕ, ಆರ್.ಪ್ರಭಾಕರ, ಭರತೇಶ, ಪ್ರಸಾದ್, ಇರ್ಫಾನ್, ಅಲೀಂ ಪಾಷ ಅವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ಆರ್.ಚೇತನ್ ಅವರು ಶ್ಲಾಘಿಸಿದ್ದಾರೆ.