ಇಂದಿನಿಂದಲೇ ಕಬಿನಿ ಜಲಾಶಯದಿಂದ ನೀರು ಬಿಡಲು ನಿರ್ಧಾರ: ಎಸ್.ಟಿ.ಸೋಮಶೇಖರ್

1 min read

ಮೈಸೂರು: ಕಬಿನಿ ಜಲಾಶಯದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.

ಸೋಮವಾರ ಮೈಸೂರಿನಲ್ಲಿ ನಡೆದ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ‌ ವಹಿಸಿ ಅವರು ಮಾತನಾಡಿದರು.

ಕಬಿನಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇಂದಿನ ನೀರಿನ ಲಭ್ಯತೆ ಮತ್ತು ಹಿಂದಿನ ವರ್ಷಗಳ ಅನುಭವದ ಮೇಲೆ ಈಗ ಈ ವ್ಯಾಪ್ತಿಯ ಎಲ್ಲಾ 52 ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಬಿಡಲಾಗುವುದು ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಸಹ ನಾಲೆಯ ಕೊನೆಯ ಭಾಗಕ್ಕೆ ನೀರು ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿ ತಕ್ಷಣ ಸಭೆ ಮಾಡುವಂತೆ ಕೇಳಿದ್ದರು ಎಂದು ಹೇಳಿದರು.

ಕಾಲುವೇ ದುರಸ್ಥಿ, ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕೊನೆಯ ಭಾಗದ ಕೆರೆಗೆ ಜುಲೈ ಅಂತ್ಯದ ವರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆಗೆ ಕೂರುವುದಾಗಿ ಶಾಸಕರು ಹೇಳಿದ್ದಾರೆ‌. ಈ ಅವಧಿಯೊಳಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗೆ ನನ್ನ ಸಹಮತ ಇದೆ ಎಂದು ಸಚಿವರು ಹೇಳಿದರು.

ಇಂದಿನಿಂದ 15 ದಿನಗಳ ವರೆಗೆ ಸುಮಾರು1 ಟಿ.ಎಂ.ಸಿ. ನೀರನ್ನು 52 ಕೆರೆಗಳಿಗೆ ತುಂಬಿಸಲು ನಿರ್ಣಯ ಮಾಡಿದ್ದೇವೆ. ಈಗ 14.5 ಟಿ.ಎಂ.ಸಿ. ನೀರು ಈಗ ಕಬಿನಿಯಲ್ಲಿ ಲಭ್ಯವಿದೆ. ಈ ಪೈಕಿ 5 ಟಿ.ಎಂ.ಸಿ. ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಕಬಿನಿಯಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ. ಒಂದೆರಡು ಸಂಸ್ಥೆಯವರು ಆಸಕ್ತಿ ವಹಿಸಿ ಮುಂದೆ ಬಂದಿದ್ದಾರೆ ಎಂದರು.

ನಂಜನಗೂಡು ವ್ಯಾಪ್ತಿಯಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕೆಲಸಗಳನ್ನು ತೆಗೆದುಕೊಳ್ಳಲು ಶಾಸಕರಾದ ಹರ್ಷವರ್ಧನ್ ಅವರು ಒಂದು ವರ್ಷದಿಂದ ಪ್ರಯತ್ನ ಮಾಡಿದ್ದರು. ಇದಕ್ಕೆ ಈಗ ಅನುದಾನ ಮಂಜೂರು ಆಗಿದೆ ಎಂದರು.

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌. ಸುರೇಶ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎನ್. ಮಹೇಶ್, ಅನೀಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಹರ್ಷವರ್ಧನ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಂಕರೇಗೌಡ, ಕಬಿನಿ ಜಲಾಶಯದ ಅಧೀಕ್ಷಕ ಇಂಜಿನಿಯರ್ ಶಿವ ಮಾದಯ್ಯ, ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಬಾಬು, ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಚಾಮರಾಜನಗರ ಜಿಲ್ಲಾಧಿಕಾರಿ ಎಂ‌.ಆರ್. ರವಿ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *