ಭೂ ಕಬಳಿಕೆ ಪ್ರಕರಣದ ತನಿಖೆಗೆ ರೋಹಿಣಿ ಸಿಂಧೂರಿಯವರನ್ನೇ ನೇಮಿಸಿ: ವಾಟಾಳ್ ನಾಗರಾಜ್ ಪ್ರತಿಭಟನೆ
1 min readಮೈಸೂರು: ಮೈಸೂರಿನಲ್ಲಿ ನಡೆದಿರುವ ಭೂ ಕಬಳಿಕೆ ಪ್ರಕರಣದ ತನಿಖೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನೇ ನೇಮಿಸುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ, ಭೂ ಮಾಫಿಯಾವನ್ನು ಸಮಗ್ರ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಭೂಮಾಫಿಯ ಮೈಸೂರು ನಗರದಲ್ಲಿ ನಿರಂತರವಾಗಿ ನಡೆದಿದೆ. ಸುಮಾರು 25 ವರ್ಷದಿಂದ ಮೈಸೂರಿನಲ್ಲಿ ನಡೆದಿರುವ ಭೂ ಹಗರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅರಣ್ಯ ಭೂಮಿ ಹಾಗು ಕೆರೆ ಒತ್ತುವಾರಿ ಆಗಿರುವ ಬಗ್ಗೆಯೂ ತನಿಖೆ ಆಗಬೇಕು. ಈ ವಿಚಾರದಲ್ಲಿ ಸಿ ಎಂ ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಲ್ಲ, ಅವರು ಧೈರ್ಯ ಮಾಡಿ ತನಿಖೆ ಮಾಡಿಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಸತ್ಯವಂತರ ರಾಜ್ಯ ಬರಬೇಕು, ನನಗೆ ಜವಾಬ್ದಾರಿ ಕೊಟ್ಟರೆ 6 ತಿಂಗಳು ಉತ್ತಮ ಸರ್ಕಾರ ನಡೆಸಿ ತೋರಿಸುತ್ತೇನೆ.
ಈ ರಾಜ್ಯ ಬಸವಣ್ಣರ ರಾಜ್ಯ ಆಗಬೇಕು, ಈ ಸರ್ಕಾರ ರಚನೆ ಆಗಿರುವುದೇ ಭ್ರಷ್ಟಾಚಾರದಿಂದ. ರೋಹಿಣಿ ಸಿಂಧೂರಿ ಒಬ್ಬ ದಕ್ಷ ಅಧಿಕಾರಿ, ಭೂ ಮಾಫಿಯಾದ ತನಿಖೆ ಆಗುವ ಮೊದಲೇ ಅವರನ್ನು ಓಡಿಸಿದ ಸರ್ಕಾರ ಇದು. ಮೈಸೂರಿನಲ್ಲಿ ಭ್ರಷ್ಟರ ಕೂಟವೇ ಇದೆ. ಮೈಸೂರಿನಲ್ಲಿ ಲಕ್ಷ ಲಕ್ಷ ಕೋಟಿ ನುಂಗಿದ್ದಾರೆ. ಎಲ್ಲವೂ ಬಹುತೇಕ ರಾಜಕಾರಣಿಗಳಿಂದಲೇ ನಡೆಯುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕತೆ ಇದ್ದರೆ ರೋಹಿಣಿ ಸಿಂಧೂರಿ ಅವರನ್ನೇ ತನಿಖೆಗೆ ನೇಮಿಸಲಿ, ಅವರಲ್ಲಿ ತಪ್ಪು ಕಂಡರೆ ಅಧಿಕಾರದಿಂದ ಇಳಿಸಲಿ ಅಂತ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.