ಕೊರೊನಾ ಜಾಗೃತಿ ಯಶಸ್ವಿ: ಮೈಸೂರಿನ ಈ ಗ್ರಾಮ ಪಂಚಾಯತಿಯಲ್ಲಿ “ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ”

1 min read

ಪಿರಿಯಾಪಟ್ಟಣ: ಮುಂಜಾಗ್ರತೆವಹಿಸಿದರೆ, ಜಾಗೃತರಾದರೆ ಸಮಸ್ಯೆಗಳಿಂದ ಶೀಘ್ರವೇ ಪಾರಾಗಬಹುದು ಎಂಬುದಕ್ಕೆ ಪಿರಿಯಾಪಟ್ಟಣ ತಾಲೂಕಿನ ರಾಮನಾಥತುಂಗ ಪಂಚಾಯತಿ ಕಾರ್ಯವು ಸಾಕ್ಷಿಯಾಗಿದೆ.

ಕೊರೊನಾ ಎರಡನೇ ಅಲೆಯು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸುತ್ತಿದೆ ಎಂಬ ಮಾಹಿತಿ ತಿಳಿದೊಡನೆ. ರಾಮನಾಥತುಂಗ ಪಂಚಾಯತಿ ಎಚ್ಚೆತ್ತುಕೊಂಡು ಕೊರೊನಾ ಜಾಗೃತಿ ಮೂಡಿಸಲು ಮುಂದಾಗಿ ಯಶಸ್ವಿಯಾಗಿದೆ.

ಕೊರೊನಾ ಎರಡನೇ ಅಲೆಯನ್ನು ತಡೆಯುವ ಹಿನ್ನೆಲೆ ಸರ್ಕಾರವು ಲಾಕ್‌ ಡೌನ್‌ ಘೋಷಣೆ ಮಾಡುತ್ತಿದ್ದ ಹಾಗೆಯೇ, ನಗರ ಪ್ರದೇಶದಲ್ಲಿದ್ದವರು ಹಳ್ಳಿಗಳತ್ತ ಮುಖ ಮಾಡಿದ ಹಿನ್ನೆಲೆ, ರಾಮನಾಥತುಂಗ ಗ್ರಾಪಂ ವ್ಯಾಪ್ತಿಯಲ್ಲಿ ಏಕಾಏಕಿ ಕೊರೊನಾ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಯಿತು.

ಈ ಬಗ್ಗೆ ತಕ್ಷಣವೇ ಜಾಗೃತಗೊಂಡ ಗ್ರಾಪಂ ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು, ವಾಟರ್‌ ಮ್ಯಾನ್‌ ಸೇರಿದಂತೆ ಟಾಸ್ಕ್‌ ಫೋರ್ಸ್‌ ರಚನೆ ಮಾಡಲಾಯಿತು. ಟಾಸ್ಕ್‌ ಫೋರ್ಸ್‌ ಮೂಲಕ ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಮುಂದಾದರು. ಸೋಂಕಿತರಿಗೆ ಅಗತ್ಯ ಔಷಧಿ ಕಿಟ್‌ ಗಳನ್ನು ವಿತರಿಸುವುದರ ಜೊತೆಗೆ ಅವರ ಆರೋಗ್ಯದತ್ತಲೂ ಗಮನಹರಿಸಿದರು. ಜೊತೆ, ಜೊತೆಗೆ ಗ್ರಾಪಂ ವ್ಯಾಪ್ತಿಯ 9 ಗ್ರಾಮಗಳಿಗೂ ಸ್ಯಾನಿಟೈಸ್ ಮಾಡಿಸಲಾಯಿತು.‌

ಗ್ರಾಪಂನ ಪ್ರತಿ ಗ್ರಾಮಗಳಿಗೆ ತೆರಳಿ ಮೈಕ್‌ ಮೂಲಕ ಜನರಿಗೆ ಮಾಸ್ಕ್‌ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ, ಸಾಧ್ಯವಾದಷ್ಟು ಹೊರಗೆ ಓಡಾಡದಂತೆ ಮನವಿ ಮಾಡಲಾಯಿತು. ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಲಾಯಿತು.

ಸೋಂಕಿತರ ಸಂಖ್ಯೆ 35 ರಿಂದ 2ಕ್ಕೆ ಇಳಿಕೆ

ಕೊರೊನಾ ಪ್ರಕರಣ ಕಂಡು ಬಂದ ಕೂಡಲೇ, ಸೋಂಕಿತರ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಯಾನಿಟೈಸ್‌ ಮಾಡಿಸಲಾಗಿದೆ. ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಇತರರಿಗೆ ಹರಡದಂತೆ ಎಚ್ಚರಿಕೆವಹಿಸುವಂತೆ ಅಗತ್ಯ ಮಾಹಿತಿ ನೀಡಲಾಗಿದೆ. ಸೋಂಕಿತರಿಗೆ ಅಗತ್ಯ ಆರೋಗ್ಯ ತಪಾಷಣೆ ಮಾಡುವುದು. ಹೀಗೆ ಹಲವು ಮಹತ್ವದ ಕಾರ್ಯಗಳಿಂದ ಗ್ರಾಪಂ ವ್ಯಾಪ್ತಿಯಲ್ಲಿ 35 ರಿಂದ 2 ಪ್ರಕರಣಗಳಿಗೆ ಇಳಿಕೆಯಾಗಿದೆ.

ಗ್ರಾಮಪಂಚಾಯತಿಯೇ ಕೋವಿಡ್‌ ವಾರ್‌ ರೂಮ್

ಕೊರೊನಾ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು ಹಾಗೂ ವಿ ಆರ್‌ ಡಬ್ಲ್ಯೂ ಅವರನ್ನು ಕೋವಿಡ್‌ ವಾರ್‌ ರೂಮ್‌ ಕಚೇರಿಯಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುವಂತೆ ನಿಯೋಜಿಸುವ ಮೂಲಕ ಗ್ರಾಪಂ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿಗೆ ತುತ್ತಾದವರನ್ನು ಪತ್ತೆ ಹಚ್ಚುವ, ಅವರನ್ನು ಆಸ್ಪತ್ರೆಗೆ ದಾಖಲಿಸುವ, ಅವರ ಆರೋಗ್ಯವನ್ನು ವಿಚಾರಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ ಎಲ್ಲಾ ಗ್ರಾಪಂಗಳು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ರಾಮಾನಾಥತುಂಗಾ ಗ್ರಾಪಂ ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಇತರೆ ಗ್ರಾಪಂಗಳಿಗೆ ಮಾದರಿಯಾಗಿದೆ. ಶೀಘ್ರವೇ ಪಿರಿಯಾಪಟ್ಟಣ ತಾಲೂಕು ಕೊರೊನಾ ಮುಕ್ತವಾಗಲಿದೆ.

-ಕೃಷ್ಣಕುಮಾರ್‌, ಕಾರ್ಯನಿರ್ವಾಹಣಾಧಿಕಾರಿ, ಪಿರಿಯಾಪಟ್ಟಣ

ಕೊರೊನಾ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಬಾರಿ ಸ್ಯಾನಿಟೈಸ್‌ ಮಾಡಿಸಲಾಗಿದ್ದು, ಗ್ರಾಪಂ ವತಿಯಿಂದ ಸೋಂಕಿತರಿಗೆ ಅಗತ್ಯ ಔಷಧಿ ಕಿಟ್‌ ವಿತರಿಸಲಾಗುತ್ತಿದೆ.

-ಶ್ರೀಕಾಂತ್‌ ಕೊಟ್ಟಗಿ, ಪಿಡಿಓ, ರಾಮನಾಥತುಂಗಾ

About Author

Leave a Reply

Your email address will not be published. Required fields are marked *