ಕೇಂದ್ರದಲ್ಲಿ ನೂತನ ಸಹಕಾರಿ ಸಚಿವಾಲಯ; ಪ್ರಧಾನಿ ನರೇಂದ್ರ ಮೋದಿ, ಗೃಹ ಮಂತ್ರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಎಸ್.ಟಿ. ಸೋಮಶೇಖರ್

1 min read

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ನೂತನ ಸಹಕಾರ ಸಚಿವಾಲಯವನ್ನು ಸ್ಥಾಪನೆ ಮಾಡುತ್ತಿರುವುದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಕ್ರಮಕ್ಕೆ ನಾನು ವೈಯುಕ್ತಿಕವಾಗಿ ಹಾಗೂ ಎಲ್ಲ ಸಹಕಾರಿಗಳ, ರೈತಾಪಿ ವರ್ಗದವರ ಪರವಾಗಿ ಮುಕ್ತ ಕಂಠದಿಂದ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ಇಂಥ ಒಂದು ನಿರ್ಣಯವನ್ನು ತೆಗೆದುಕೊಂಡ ನರೇಂದ್ರ ಮೋದಿ ಅವರಿಗೆ ಹಾಗೂ ಗೃಹ ಮಂತ್ರಿ ಅಮಿತ್ ಷಾ ಅವರಿಗೆ ಅಭಿನಂದನೆಯನ್ನು ಅರ್ಪಿಸುತ್ತೇನೆ ಅಂತ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಸಹಕಾರದಿಂದ ಸಮೃದ್ಧಿ ಎಂಬ ತತ್ವಕ್ಕೆ ಬದ್ಧವಾಗಿರುವ ಕೇಂದ್ರ ಸರ್ಕಾರದ ಕ್ರಮ ನಿಜಕ್ಕೂ ಒಂದು ಮಾದರಿ ಹೆಜ್ಜೆಯಾಗಿದೆ. ನಮ್ಮ ದೇಶದ ಇಡೀ ವ್ಯವಸ್ಥೆಯು ಸಹಕಾರಿ ತತ್ವದಡಿಯಲ್ಲೇ ಬೆಳೆದುಬಂದಿದೆ. ಆದರೆ, ಅವುಗಳ ರೂಪಗಳು, ಕಾರ್ಯವೈಖರಿಗಳು ಬೇರೆ ಬೇರೆ ಅಷ್ಟೇ. ಸಹಕಾರ ವ್ಯವಸ್ಥೆ ಹಾಗೂ ರೈತಾಪಿ ವರ್ಗಕ್ಕೆ ನೇರ ಹಾಗೂ ಅವಿನಾಭಾವ ಸಂಬಂಧವಿದೆ. ಈ ನಿಟ್ಟಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಮಹತ್ವದ್ದಾಗಿದೆ. ರೈತ ನಮ್ಮ ದೇಶದ ಬೆನ್ನೆಲುಬು. ಹಾಗಾಗಿ ರೈತರಿಗೆ ಅನುಕೂಲವಾಗುವಂತಹ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ನಮ್ಮ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಇದೀಗ ಕೇಂದ್ರದ ಈ ಕ್ರಮದಿಂದ ರೈತಾಪಿ ವರ್ಗ ಮತ್ತು ಸಹಕಾರಿಗಳಿಗೆ ಅನುಕೂಲವಾಗಲಿದ್ದು, ಅವರ ಅಭ್ಯುದಯಕ್ಕೆ ಶ್ರಮಿಸಲು ಪೂರಕವಾಗಲಿದೆ ಎಂಬ ಅಂಶವನ್ನು ಹೇಳಲು ಇಚ್ಛೆಪಡುತ್ತೇನೆ.

ರಾಜ್ಯದಲ್ಲಿ ಸುಮಾರು 43 ಸಾವಿರ ಕೋಆಪರೇಟಿವ್ ಸಂಸ್ಥೆಗಳು ಹಾಗೂ 5 ಸಾವಿರ ಸೌಹಾರ್ಧ ಸೊಸೈಟಿಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, 47 ಕೋಟಿ ಮಂದಿ ಸಹಕಾರಿ ಸದಸ್ಯರಿದ್ದಾರೆ. ದೇಶದಲ್ಲಿ ಸುಮಾರು 48 ಕೋಟಿ ಸಹಕಾರಿ ಸದಸ್ಯರುಗಳಿದ್ದಾರೆ. ಈ ಎಲ್ಲರಿಗೂ ಈಗ ಒಂದು ವ್ಯವಸ್ಥೆ ರೂಪುಗೊಂಡಿದ್ದು, ಸಮುದಾಯ ಆಧಾರಿತ ಅಭಿವೃದ್ಧಿಯನ್ನು ಸಹಭಾಗಿತ್ವದ ಜೊತೆಗೆ ಕೊಂಡೊಯ್ಯಲು ಸಹಕಾರಿಯಾದಂತಾಗಿದೆ. ಇದೊಂದು ನಾಗರಿಕ ಕೇಂದ್ರಿತ ಸಹಕಾರಿ ಚಳವಳಿಗೆ ಪೂರಕವಾಗಿ ಕಾರ್ಯನಿರ್ವಹಣೆ ಮಾಡಲು ರಚಿಸಿದಂತಹ ಅದ್ಭುತ ವ್ಯವಸ್ಥೆಯಾಗಿದೆ.

ಅಭಿವೃದ್ಧಿ ಪಥಕ್ಕೆ ರಹದಾರಿ ನಡೆ:

ನೂತನ ಸಹಕಾರ ಸಚಿವಾಲಯ ಸ್ಥಾಪನೆಯಿಂದ ಅನೇಕ ಉಪಯೋಗಗಳು ಸಾಧ್ಯವಾಗಲಿದೆ. ಇದನ್ನು ನಾನು ಅಭಿವೃದ್ಧಿ ಪಥಕ್ಕೆ ರಹದಾರಿ ಎಂದೇ ವಿಶ್ಲೇಷಿಸುತ್ತೇನೆ. ಸಹಕಾರ ರಂಗಕ್ಕಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಣೆ ಮಾಡುವುದರಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲಬರಲಿದೆ. ಈ ವ್ಯವಸ್ಥೆಯಿಂದ ಇನ್ನು ದೇಶದಲ್ಲಿ ಸಹಕಾರಿ ವಲಯಕ್ಕೆ ಒಂದು ಚೌಕಟ್ಟು ನಿರ್ಮಾಣವಾಗಲಿದೆ. ಪ್ರತ್ಯೇಕ ಆಡಳಿತ, ಕಾನೂನು ಮತ್ತು ನೀತಿಗಳ ರಚನೆಗೆ ಅನುಕೂಲವಾಗಲಿದೆ.

ಸಹಕಾರ ಸಿದ್ಧಾಂತ ಕಾರ್ಯನಿರ್ವಹಣೆ ಮಾಡುವುದೇ ಎಲ್ಲರನ್ನೂ ಉಳ್ಳವರನ್ನಾಗಿ ಮಾಡಬೇಕು ಎಂಬ ಸದಾಶಯದೊಂದಿಗೆ ಎಂಬುದು ಮುಖ್ಯವಾಗುತ್ತದೆ. ಅಂದರೆ, ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು, ಸಮಾಜದ ಯಾವುದೇ ಒಂದು ವರ್ಗ ಹಿಂದುಳಿಯಬಾರದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹಕಾರ ಸಿಗಬೇಕು ಎಂಬ ಮೂಲ ಆಶಯಕ್ಕೆ ಈಗ ಇನ್ನಷ್ಟು ಬಲ ಸಿಕ್ಕಂತಾಗಿದೆ. ಕಾರಣ, ಆಯಾ ರಾಜ್ಯಗಳಲ್ಲಿ ಅಲ್ಲಿಯ ಆಡಳಿತ ದೃಷ್ಟಿಗನುಸಾರವಾಗಿ ಸಹಕಾರ ಇಲಾಖೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದವು. ಈಗ ಎಲ್ಲವಕ್ಕೂ ಒಂದು ಚೌಕಟ್ಟು ದೊರೆತಂತೆ ಆಗಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಹಾಗೂ ಮಹಿಳಾ ವರ್ಗದ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಕೇಂದ್ರ ಸರ್ಕಾರದ ಈ ನಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಹೀಗಾಗಿ ಸಹಕಾರಿ ವಲಯದಿಂದ ಈ ವಲಯಗಳಿಗೆ ಇನ್ನಷ್ಟು ತಳಮಟ್ಟದಿಂದ ಕಾರ್ಯನಿರ್ವಹಿಸಿ ಸಶಕ್ತರನ್ನಾಗಿಸಲು ಅನುಕೂಲವಾಗಲಿದೆ.

ಇದೆಲ್ಲದರ ಜೊತೆಗೆ ಬಹು-ರಾಜ್ಯ ಸಹಕಾರ ಸಂಘಗಳಿಗೆ ಪ್ರತ್ಯೇಕವಾದ ಆಡಳಿತ ವ್ಯವಸ್ಥೆ, ಕಾನೂನು ಚೌಕಟ್ಟು ರಚನೆಯಾಗುವುದರ ಜೊತೆಗೆ ಕಾನೂನು ನೀತಿಗಳ ರಚನೆಗೆ ಅನುಕೂಲವಾಗಲಿದೆ. ಆದರೆ, ರಾಜ್ಯಗಳಲ್ಲಿ ಆಯಾ ರಾಜ್ಯಗಳ ನಿಯಂತ್ರಣದ ಅಧಿಕಾರಗಳು ಹಾಗೆಯೇ ಇರಲಿದೆ. ಹೀಗಾಗಿ ಸಹಕಾರಿಗಳ ಹಾಗೂ ಜನಹಿತದ ದೃಷ್ಟಿಯಿಂದ ಇದೊಂದು ಉತ್ತಮ ನಡೆ ಎಂದೇ ಹೇಳಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಇನ್ನು ನಮ್ಮ ಇಲಾಖೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ಪಡೆಯುವಲ್ಲಿಯೂ ಸಹ ಇದರಿಂದ ಅನುಕೂಲವಾಗಲಿದೆ. ಹಾಗಾಗಿ ರಾಜ್ಯಗಳಲ್ಲಿ ಮತ್ತಷ್ಟು ಅಭಿವೃದ್ಧಿಯ ಕಾರ್ಯಗಳು ಸಹಕಾರ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಹು-ರಾಜ್ಯ ಸಹಕಾರ ಸಂಘಗಳಿಗೆ ಶಿಸ್ತು

ಸಹಕಾರ ಕ್ಷೇತ್ರ ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಒಂದು ವ್ಯವಸ್ಥೆಯೊಳಗೆ ಇರಲೇಬೇಕಾಗುತ್ತದೆ. ಬಹು-ರಾಜ್ಯ ಸಹಕಾರ ಸಂಘಗಳು (ಎಂಎಸ್‌ಸಿಎಸ್) ಬೇರೆ ಬೇರೆ ರಾಜ್ಯಗಳ ಜೊತೆಗೆ ವ್ಯವಹಾರಗಳನ್ನು ನಡೆಸುವಾಗ ಅವುಗಳಿಗೆ ಒಂದು ಚೌಕಟ್ಟು, ನೀತಿ-ನಿರೂಪಣೆಗಳು ಎಂಬುದಿರಲಿಲ್ಲ. ಆಯಾ ರಾಜ್ಯಗಳಿಗೂ ಇವುಗಳ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ 2000-2001ರಲ್ಲಿ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈಗ ಇಂಥ ಒಂದು ಸಂಸ್ಥೆಗಳ ಬಲವರ್ಧನೆ ಹಾಗೂ ರಾಜ್ಯಗಳಿಗೂ ಪೂರಕವಾಗಿ ಬೆಂಬಲವನ್ನು ಕೊಡುವ ನಿಟ್ಟಿನಲ್ಲಿ ನೂತನ ಸಚಿವಾಲಯವು ಕಾರ್ಯನಿರ್ವಹಣೆ ಮಾಡಲಿದೆ.

ಮಹಾತ್ಮಾ ಗಾಂಧಿಯವರ ಆಶಯ ಪೂರ್ಣ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಆಶಯ ಸಹ ಈ ಮೂಲಕ ಪೂರ್ಣಗೊಳ್ಳಲಿದೆ. “ಒಂದು ಗ್ರಾಮಕ್ಕೆ ಒಂದು ಸಹಕಾರ ಸಂಘ” ಎಂಬ ಕಲ್ಪನೆಯನ್ನು ಹೊಂದಿದ್ದರು. ಈಗ ನಮ್ಮ ಕೇಂದ್ರ ಸರ್ಕಾರವು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡುವ ಮೂಲಕ ಆ ಒಂದು ಆಶಯಕ್ಕೆ ನೀರೆರೆದು ಪೋಷಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಿದೆ ಎಂದಿದ್ದಾರೆ.

About Author

Leave a Reply

Your email address will not be published. Required fields are marked *