ನೆರೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಈ ಕೂಡಲೇ ಪರಿಹಾರ ನೀಡಿ- ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ
1 min readಬೆಂಗಳೂರು : ನೆರೆಯಿಂದ ಹಾನಿಗೆ ಒಳಗಾಗಿರುವ ಜಿಲ್ಲೆಗಳ ಎಲ್ಲಾ ಸಂತ್ರಸ್ಥರಿಗೆ, ಮನೆ-ಬೆಳೆ-ಜಾನವಾರು ಕಳೆದುಕೊಂಡವರಿಗೆ ಈ ಕೂಡಲೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದ ಮುಖ್ಯಾಂಶಗಳು ಹೀಗಿವೆ.
2021 ರ ಜುಲೈ 26 ಮತ್ತು 27 ರಂದು ಬಾಗಲಕೋಟೆ, ಬೆಳಗಾವಿ, ಗದಗ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಾಗೂ ಆಗಸ್ಟ್ 2 ರಂದು ಉತ್ತರ ಕನ್ನಡ ಜಿಲ್ಲೆಯ ಹಲವಾರು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ್ದೆ.
ಜುಲೈ 22 ರಿಂದ 26 ರ ವರೆಗೆ ಬಿದ್ದ ಭಾರಿ ಪ್ರಮಾಣದ ಮಳೆ ಈ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಅನಾಹುತಗಳನ್ನು ಸೃಷ್ಟಿಸಿದೆ. ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ–ಜಾನವಾರುಗಳು, ಮನೆಗಳು ಹಾನಿಗೊಳಗಾಗಿವೆ. ಮನೆಯೊಳಗಿದ್ದ ಪಾತ್ರೆ-ಪಗಡೆ ಕೊಚ್ಚಿಕೊಂಡು ಹೋಗಿವೆ. ಒಟ್ಟಾರೆ ಪರಿಸ್ಥಿತಿಯಲ್ಲಿ ಉಣ್ಣಲು ಅನ್ನ ಇಲ್ಲ, ಉಡಲು ಬಟ್ಟೆ ಇಲ್ಲ, ಉಳಿಯಲು ಸೂರಿಲ್ಲ, ಕುಡಿಯಲು ನೀರಿಲ್ಲ ಎನ್ನುವ ಪರಿಸ್ಥಿತಿ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಮನೆಯೊಳಗಿದ್ದ ಪಾತ್ರೆ ಪಗಡೆ, ಬಟ್ಟೆಗಳು, ಮಕ್ಕಳ ಶಾಲಾ ಬ್ಯಾಗು, ಪುಸ್ತಕಗಳು, ದವಸ ಧಾನ್ಯಗಳು, ಟಿವಿ, ಫ್ರಿಡ್ಜ್, ಮಿಕ್ಸರ್, ಗ್ಯಾಸ್ ಸಿಲಿಂಡರ್‌ಗಳ ಸಮೇತ ನಿತ್ಯ ಬಳಕೆಯ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಮನೆಯೊಳಗೆ ನುಗ್ಗಿದ ನೀರು ನೂರಾರು ಮನೆಗಳನ್ನು ಹಾನಿ ಮಾಡಿದೆ. ಪ್ರವಾಹದಿಂದ ಕೊಚ್ಚಿ ಬಂದ ಮಣ್ಣು, ಕೆಸರು ತುಂಬಿಕೊಂಡು ಸಾವಿರಾರು ಮನೆಗಳನ್ನು ಮುಚ್ಚಿ ಹಾಕಿದೆ. ಮಕ್ಕಳು ಮರಿಗಳಾದಿಯಾಗಿ ಎಲ್ಲರ ಆರೋಗ್ಯದ ಬಗ್ಗೆಯೂ ತುರ್ತು ಗಮನ ಹರಿಸಬೇಕಾದ, ಪೌಷ್ಠಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಜರುಗಿಸಬೇಕಾದ ಅಗತ್ಯವಿದೆ.
ಭತ್ತದ ಗದ್ದೆಗಳು, ತೋಟದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ, ನೀರಲ್ಲಿ ಮುಳುಗಿ ಕೊಳೆತು ಹೋಗಿವೆ. ದನದ ಕೊಟ್ಟಿಗೆಗಳು ಜಲಾವೃತ ಆಗಿರುವುದರಿಂದ ಸಂಗ್ರಹಿಸಿದ್ದ ಮೇವು ನೀರಿನಲ್ಲಿ ಕೊಚ್ಚಿ ಹೋಗಿ ಮೇವಿಗೂ ತತ್ವಾರ ಬಂದಿದೆ. 2019 ರಿಂದ 2021 ರ ವರೆಗೆ ಸತತವಾಗಿ ಈ ಜಿಲ್ಲೆಗಳು ಮೂರು ವರ್ಷದಿಂದ ನೆರೆಹಾವಳಿ ತುತ್ತಾಗುತ್ತಿವೆ.
2019 ಮತ್ತು 2020 ರಲ್ಲಿ ಹಾನಿಗೊಳಗಾದ ಪ್ರದೇಶಗಳ ಜನರಿಗೆ ಇದುವರೆಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನೀಡಿಲ್ಲ. ನದಿ ಪಾತ್ರದ ಗ್ರಾಮಗಳ ಸ್ಥಳಾಂತರ ಆಗಿಲ್ಲ ಎಂದು ನೆರೆಪೀಡಿತರು ತಮ್ಮ ಸಂಕಷ್ಟ ಹೇಳಿಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
2019 ರಲ್ಲಿ ಪ್ರವಾಹ ಬಂದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು ಮನೆ ಕಳೆದುಕೊಂಡವರಿಗೆ ಪರಿಹಾರ ಘೋಷಿಸಿದ್ದರು. ಸರ್ಕಾರ ಈ ಹಿಂದೆ ಘೋಷಿಸಿದ್ದಂತೆ ಮನೆ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಇರುವವರಿಗೆ ಬಾಡಿಗೆ ಹಣ ಬಿಡುಗಡೆ ಮಾಡಿಲ್ಲ. ಪ್ರತಿ ತಿಂಗಳು ಹತ್ತು ಸಾವಿರ ನೀಡುತ್ತೇವೆ ಎಂದು ಹೇಳಿದ್ದೂ ಸುಳ್ಳಾಗಿದೆ.
ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ರೂಪಾಯಿ, ಭಾಗಶಃ ಮನೆ ಹಾನಿಯಾದವರಿಗೆ ಮೂರು ಲಕ್ಷ ರೂಪಾಯಿ, ಸ್ವಲ್ಪ ಹಾನಿಯಾದರೆ ಐವತ್ತು ಸಾವಿರದಿಂದ ಒಂದು ಲಕ್ಷ ಕೊಡುವುದಾಗಿ ಹೇಳಿದ್ದರು. ಆದರೆ ಮನೆ ಕಳೆದುಕೊಂಡ ಯಾರೊಬ್ಬರಿಗೂ ಈ ವರೆಗೂ ಯಾವ ಪರಿಹಾರದ ಹಣವೂ ಸಿಕ್ಕಿಲ್ಲ.
ಅಧಿಕಾರಿಗಳು ಸತ್ಯ ಹೇಳುತ್ತಿಲ್ಲ ಎಂದು ಪ್ರವಾಹ ಪೀಡಿತ ಪ್ರದೇಶಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೇಕ ಕಡೆಗಳಲ್ಲಿ ಮನೆಗಳನ್ನು ಸ್ಥಳಾಂತರ ಮಾಡುವ ಅಗತ್ಯವಿದೆ. ಇದಕ್ಕೆ ಸರ್ಕಾರ ಜಾಗ ನೀಡಬೇಕು. ಮನೆ ಕಟ್ಟಿಕೊಡಬೇಕು. ಅಗತ್ಯವಿರುವ ಹಳ್ಳಿಗಳ ಸ್ಥಳಾಂತರದ ಅನಿವಾರ್ಯತೆ ಇದ್ದು ಈ ಬಗ್ಗೆಯೂ ಸರ್ಕಾರ ಗಂಭೀರವಾಗಿ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ತೂಗು ಸೇತುವೆಗಳೂ ನೀರಿನಲ್ಲಿ ಕೊಚ್ಚಿ ಹೋಗಿದ್ದು ಇಲ್ಲಿಯವರೆಗೂ ನಿರ್ಮಾಣ ಕಾರ್ಯ ಆಗಿಲ್ಲ. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ, ನೂರಾರು ಹೆಕ್ಟೇರ್ ತೋಟಗಳು ಕೊಚ್ಚಿ ಹೋಗಿವೆ, ಹಾಳಾಗಿವೆ. ಹಲವಾರು ಕಡೆ ತೀವ್ರ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ರಸ್ತೆ, ಸೇತುವೆ, ಸರ್ಕಾರಿ ಶಾಲೆ, ಪಶು ಆಸ್ಪತ್ರೆ, ಕುಡಿಯುವ ನೀರಿನ ಯೋಜನೆ, ವಿದ್ಯುತ್ ಸಂಪರ್ಕ ಎಲ್ಲವೂ ಹಾಳಾಗಿರುವುದನ್ನು ನೆರೆಪೀಡಿತ ಪ್ರದೇಶಗಳ ಜನರ ಜತೆಗೇ ತೆರಳಿ ವೀಕ್ಷಿಸಿದ್ದೇನೆ.
ಸುಮಾರು ಮಂದಿ ನೆರೆಯಿಂದ ತಮಗಾದ ನಷ್ಟ ಮತ್ತು ಪಡುತ್ತಿರುವ ಸಂಕಷ್ಟಗಳನ್ನು ಕಣ್ಣೀರಿನ ಜತೆಗೆ ನನ್ನ ಜತೆ ಹಂಚಿಕೊಂಡಿದ್ದಾರೆ. ಕಾಳಿ ಯೋಜನೆಯ ಕದ್ರಾ ಅಣೆಕಟ್ಟೆನಿಂದ ಪೂರ್ವ ಸೂಚನೆ ಇಲ್ಲದೆ ಭಾರೀ ಪ್ರಮಾಣದಲ್ಲಿ ನೀರು ಬಿಟ್ಟಿದ್ದರಿಂದ ಹಠಾತ್ ನೆರೆಗೆ ವ್ಯಾಪಾರಿ ಮುಂಗಟ್ಟುಗಳು ನಾಶವಾಗಿವೆ. ಕೋವಿಡ್-19 ಮತ್ತು ಲಾಕ್‌ಡೌನ್ ಕಾರಣದಿಂದ ಮೊದಲೇ ವಿಪರೀತ ಸಂಕಷ್ಟದಲ್ಲಿದ್ದ ವ್ಯಾಪಾರಿಗಳ, ರೈತರು, ಕೂಲಿ ಕಾರ್ಮಿಕರ ಬದುಕು ಈಗ ಸಂಪೂರ್ಣ ನೆಲಕಚ್ಚಿದೆ. ಇವರಿಗೆ ತಕ್ಷಣ ಪುನರ್ವಸತಿ ಕಲ್ಪಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಜತೆಗೆ ಆರ್ಥಿಕ ನೆರವು ನೀಡಿ ಈ ಸಣ್ಣ ಪುಟ್ಟ ವ್ಯಾಪಾರಿ ಸಮುದಾಯ, ರೈತರು, ಬೆಳೆಗಾರರು, ಕಾರ್ಮಿಕ ಸಮುದಾಯ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡಬೇಕಿದೆ.
2019-2020 ರಲ್ಲೂ ನೆರೆಗೆ ತುತ್ತಾಗಿದ್ದ ಪ್ರದೇಶಗಳ ಸಾಕಷ್ಟು ಜನರೇ ಈ ಬಾರಿಯೂ ಪ್ರವಾಹಕ್ಕೂ ಸಿಲುಕಿದ್ದಾರೆ.
ಹಿಂದಿನ ಅವಧಿಗಳಲ್ಲಿ ಸರ್ಕಾರ ಕೊಟ್ಟ ಪರಿಹಾರ “ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ” ಎನ್ನುವಂತಾಗಿದೆ.
ಹೀಗಾಗಿ…
- ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳನ್ನು ದುರಸ್ತಿ/ ಪುನರ್‌ನಿರ್ಮಿಸಬೇಕು.
• ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಪ್ರವಾಹ ಪರಿಹಾರದ ಮೊತ್ತ ರಾಜ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯೋಚಿತ ಪರಿಹಾರ ಬಿಡುಗಡೆ ಮಾಡಿಸಬೇಕು.