ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಾರಣವಾದ ಭೂ ಹಗರಣ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

1 min read

ಬೆಂಗಳೂರು: ಇಬ್ಬರು ಐಎಎಸ್ ಅಧಿಕಾರಿಗಳ ನಡುವಣ ಕಿತ್ತಾಟಕ್ಕೆ ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಕಾರಣ ಎನ್ನಲಾಗುತ್ತಿದೆ. ಆ ಹಗರಣದ ಬಗ್ಗೆ ಸರ್ಕಾರ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿಂದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೈಸೂರು ಮಹಾ ನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಮತ್ತು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ನಡುವಣ ಜಗಳಕ್ಕೆ ಅದಕ್ಕೆ ಬಿಜೆಪಿಯ ಸಂಸದ, ಶಾಸಕರು ಹಾಗೂ ಜೆಡಿಎಸ್‍ನ ಮಾಜಿ ಸಚಿವ ಸಾ.ರಾ. ಮಹೇಶ್ ಕಾರಣ ಎಂದರು.

ಮೊದಲಿಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಬಿಜೆಪಿಯವರು ಬೆಂಬಲಿಸಿದರು. ಅದಲರಲೂ ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಅವರ ಪರ ಇದ್ದರು. ಬಳಿಕ ವಿರೋಧ ವ್ಯಕ್ತ ಮಾಡಿದರು. ಇಬ್ಬರು ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದವರೇ ಬಿಜೆಪಿ ಶಾಸಕರು. ಇಂಥ ಸಂದರ್ಭದಲ್ಲಿ ಜಿಲ್ಲಾ ಮಂತ್ರಿ ಏನು ಮಾಡುತ್ತಿದ್ದರು. ಇದು ಅವರ ವೈಫಲ್ಯ ಅಲ್ಲವೇ ?

ಪತ್ರಿಕಾಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗಳಿಗೆ ಅನುಮತಿ ನೀಡಿದವರು ಯಾರು ? ಅನುಮತಿ ಇಲ್ಲದೆ ಪತ್ರಿಕಾಗೋಷ್ಠಿ ಕರೆಯಲು ಅವಕಾಶ ಇಲ್ಲ. ವರ್ಗಾವಣೆ ಶಿಕ್ಷೆ ಅಲ್ಲ. ಸರ್ಕಾರ ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಶಕ್ತಿ ಕಳೆದುಕೊಂಡಿದೆ. ಆಡಳಿತವೇ ಇಲ್ಲದಂತೆ ಆಗಿರುವುದರಿಂದ ಅಧಿಕಾರಿಗಳು ಬೀದಿಗೆ ಬರಲು ಕಾರಣವಾಗಿದೆ.

ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು ಎಂಬ ಬಗ್ಗೆ ತನಿಖೆ ಆಗಬೇಕು. ಯಾವ ಯಾವ ರಾಜಕಾರಣಿಗಳ ಭೂಮಿ ಹಗರಣಗಳಿವೆ. ಈ ವಿಷಯದಲ್ಲಿ ಯಾರ್ಯಾರು ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬುದು ತನಿಖೆಯಿಂದ ಹೊರಬರಬೇಕು.

ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಅವರನ್ನು ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಬಿಗಿಯಾದ ಸರ್ಕಾರದ ಇಲ್ಲದೇ ಇದ್ದರೆ ಈ ರೀತಿಯ ಅನಾಹುತಗಳಿಗೆ ದಾರಿ ಆಗುತ್ತದೆ. ಹುಚ್ಚು ಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಆಗಿದೆ ರಾಜ್ಯ ಸರ್ಕಾರದ ಪರಿಸ್ಥಿತಿ.

ರಾಜಕಾರಣಿಗಳು ಅಧಿಕಾರಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯ ಅವರು ಹೇಳಿದರು.

About Author

Leave a Reply

Your email address will not be published. Required fields are marked *