ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್: ವೃತ್ತಿಪರ ಕೋರ್ಸ್ಗೆ PU ಅಂಕ ಪರಿಗಣನೆ ಇಲ್ಲ
1 min readಬೆಂಗಳೂರು: ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ ದೊರೆತಿದ್ದು ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆಗೆ ಪಿಯುಸಿ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಮತ್ತು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಸಿಡಿಎಂ ಡಾ.ಅಶ್ವತ್ಥ್ ನಾರಾಯಣ ಘೋಷಿಸಿದ್ದಾರೆ.
ಪಿಯುಸಿ ಅಂಕಗಳನ್ನು ಪರಿಗಣಿಸದಿರಲು ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನಿಗದಿಯಂತೆ ಆಗಸ್ಟ್ ೨೮, ೨೯ ರಂದು ಸಿಇಟಿ ಪರೀಕ್ಷೆ. ಸಿಇಟಿ ಅಂಕಗಳನ್ನು ಮಾನದಂಡವಾಗಿಟ್ಟುಕೊಂಡು ವೃತ್ತಿಪರ ಕೋರ್ಸ್ ಗಳ ಸೀಟು ಹಂಚಿಕೆ ನಿರ್ಧಾರ ಮಾಡಲಾಗಿದೆ.
“KCET ಪರೀಕ್ಷೆಯನ್ನು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಆಗಸ್ಟ್ 28, 29 ಹಾಗೂ 30ರಂದು ನಡೆಸಲಾಗುವುದು. ಆಗಸ್ಟ್ 28 – ಜೀವಶಾಸ್ತ್ರ, ಗಣಿತ, ಆಗಸ್ಟ್ 29 – ಭೌತಶಾಸ್ತ್ರ, ರಸಾಯನಶಾಸ್ತ್ರ, ಆಗಸ್ಟ್ 30 – ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ. ಪಿಯುಸಿ ಅಂಕಗಳ ವಿಚಾರವಾಗಿ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು. ಪದವಿ ಕಾಲೇಜುಗಳಿಗೆ, ಇತರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ದೃಷ್ಟಿಯಿಂದ ಅಗತ್ಯವಿರುವ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಜ್ಞಾನ ವಿಭಾಗದ ಡಿಗ್ರಿ ವಿದ್ಯಾರ್ಥಿಗಳ ಪ್ರವೇಶವನ್ನು CET ಮುಖಾಂತರವೇ ನಿರ್ಧರಿಸುವ ಚಿಂತನೆಯಿದೆ” ಅಂತ ಡಿಸಿಎಂ ಅಶ್ವಥ್ ನಾರಾಯಣ್ ಟ್ವೀಟ್ ಮಾಡಿ ತಿಳಿಸಿದ್ದಾರೆ.