ಪೊಲೀಸ್ ಎಂಬ ಗುಮ್ಮನ ಒಳಹೊಕ್ಕು……..
1 min readಸದ್ಯ ಲಾಕ್‌ಡೌನ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವುದು ಒಂದು ಕಡೆ ರಸ್ತೆಯಲ್ಲಿ ಪೊಲೀಸರ ಲಾಠಿ ತರಾಟೆ. ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ದ ನೆಟ್ಟಿಗರ ಆಕ್ರೋಶದ ಭರಾಟೆ. ಯಾವಾಗ ಮೊದಲ ಹಂತದ ಲಾಕ್‌ಡೌನ್ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲವೋ, ! ಯಾವಾಗ ಎರಡನೇ ಹಂತದ ಲಾಕ್‌ಡೌನ್‌ನಲ್ಲಿ ಖುದ್ದು ಸಿಎಂಗೆ, ಸಿಎಂ ಸೋಮವಾರದಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್…., ಒಂದು ನರಪಿಳ್ಳೆಯೂ ರಸ್ತೆಗೆ ಬರಲು ಬಿಡುವುದಿಲ್ಲ ಅಂತಾ ಅಬ್ಬರಿಸಿದರೋ, ಆಗಲೇ ನೋಡಿ ಶುರುವಾಗಿದ್ದು ಅಸಲಿ ಆಟ. ! ಪ್ರತಿದಿನ ಜನರಿಗೆ ಹೇಳಿ ಹೇಳಿ ಹೈರಾಣಾಗಿದ್ದ ಪೊಲೀಸರಲ್ಲಿ ಒಂದು ವಿದ್ಯುತ್ ಸಂಚಾರವಾಗಿ ಹೋಯ್ತು. ರಾಜ್ಯದ ಮೂಲೆ ಮೂಲೆಯಲ್ಲಿ ಲಾಠಿ ಅಬ್ಬರಿಸಿತು. ಅನಗತ್ಯವಾಗಿ ರಸ್ತೆಗಿಳಿದವರಿಗೆ ಅಮ್ಮ, ಅಪ್ಪ ಎಲ್ಲರೂ ಒಟ್ಟೊಟ್ಟಿಗೆ ನೆನಪಾದರು. ಇದೇ ವೇಳೆ ದೂರದ ಮಹಾರಾಷ್ಟ್ರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಹಳೆಯ ವಿಡಿಯೋ ಎಲ್ಲೆಡೆ ಹರಿದಾಡಿ ಸಂಚಲನ ಮೂಡಿಸಿಬಿಡ್ತು. ಈಗ ಇದೆಲ್ಲಾ ಮುಗಿದ ಅಧ್ಯಾಯ. ಆದರೆ ಈ ಬೆಳವಣಿಗೆ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಳ್ಳುವ ಅವಶ್ಯಕತೆ, ಅನಿವಾರ್ಯತೆ ಎರಡು ಇದೆ ಅನಿಸಿದ ಕಾರಣ ಈ ಬಗ್ಗೆ ಬರೆಯುತ್ತಿದ್ದೇನೆ.
ಪೊಲೀಸರು ಮನುಷ್ಯರೇ……!
ಎಸ್ ಪೊಲೀಸರನ್ನು ಅನ್ಯಗ್ರಹದ ಜೀವಿ ಅಂತಲೇ ಬಹುತೇಕರು ಭಾವಿಸಿದ್ದಾರೆ. ಮೊದಲು ಅದರಿಂದ ಅವರು ಹೊರಬರಬೇಕು. ಯಾಕಂದ್ರೆ ಪೊಲೀಸರು ನಮ್ಮ ನಿಮ್ಮಂತೆ ಮನುಷ್ಯರೇ. ಅವರಿಗೂ ಎಲ್ಲರಂತೆ ಭಾವನೆಗಳಿವೆ, ಆಸೆ ಆಮಿಷಗಳಿವೆ, ಸ್ನೇಹಿತರಿದ್ದಾರೆ ಮನೆಯವರಿದ್ದಾರೆ. ಎಲ್ಲಕ್ಕಿಂತಾ ಹೆಚ್ಚಾಗಿ ಅವರಿಗೂ ಬದುಕಿದೆ ಅದರಾಚೆಗಿನ ಭಯ ಸಹಾ ಇದೆ. ಇನ್ನು ಪೊಲೀಸರ ಮೇಲೆ ನಾವು ಎಷ್ಟರಮಟ್ಟಿಗರ ಅವಲಂಬಿತವಾಗಿದ್ದೇವೆ ಅಂದರೆ ಪೊಲೀಸರಿಲ್ಲದ ಸಮಾಜ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ನಾವು ನಮಗೆ ಗೊತ್ತಿಲ್ಲದೆ ಪೊಲೀಸರ ಮೇಲೆ ಅವಲಂಬಿತರಾಗಿ ಬಿಟ್ಟಿದ್ದೇವೆ. ಅದು ಪ್ರತ್ಯಕ್ಷವಾಗಿರಬಹುದು ಪರೋಕ್ಷವಾಗಿರಬಹುದು ಎಲ್ಲದಕ್ಕೂ ಪೊಲೀಸರು ನಮಗೆ ಬೇಕೆ ಬೇಕು. ಅದು ಟೀಕೆ ಟಿಪ್ಪಣಿ ಹಾಗೂ ಬೈಯವುದಕ್ಕೂ ಸಹಾ ಹೊರರತಾಗಿಲ್ಲ. ಅದಕ್ಕೂ ನಮಗೆ ಪೊಲೀಸರೇ ಬೇಕು. ಇರಲಿ ಇದೆಲ್ಲದಕ್ಕೂ ಪೊಲೀಸರು ಹೊಂದಿಕೊಂಡುಬಿಟ್ಟಿದ್ದಾರೆ. ಇದ್ಯಾವುದು ಅವರಿಗೆ ಹೊಸದೇನಲ್ಲ. ಅವರಿಗೆ ಗೊತ್ತಿದೆ ನಡೆಯುವ ಕಾಲು ಎಡುವತ್ತದೆ ಹೊರತು, ನಿಂತ ಕಾಲಲ್ಲ. ಹೀಗಾಗಿ ಎಡವಿದರು, ರಕ್ತವೇ ಸುರಿದರು ಅವರ ಆ ಕಾಲು ನಿಲ್ಲಲ್ಲ. ತನ್ನ ಗುರಿ ತಲುಪದೆ ವಿಶ್ರಮಿಸುವುದಿಲ್ಲ.
ಪೊಲೀಸ್ ಲಾಠಿ ರುಚಿ………
ಇದು ಪೊಲೀಸರು ಜನರನ್ನು ಹೊಡೆದಿದ್ದನ್ನು ಸಮರ್ಥಿಸುವ ಬರಹ ಅಲ್ಲ. ಆದರೆ ನಿಸ್ವಾರ್ಥವಾಗಿ, ಯಾರದೋ ಬದುಕನ್ನು ಉಳಿಸಲು, ಇನ್ಯಾರನ್ನೋ ರಕ್ಷಿಸಲು, ಮತ್ಯಾರಿಗೋ ಹೊಡೆಯಬೇಕಾದ ಪೊಲೀಸರ ಅಸಾಹಯಕತೆಯನ್ನು ಪರಿಚಯ ಮಾಡಿಕೊಡುವ ಪ್ರಯತ್ನವಷ್ಟೇ. ಒಮ್ಮೆ ಯೋಚಿಸಿ ಇದು ನಿಮಗೂ ಅನಿಸಿರಬಹುದು. ಪೊಲೀಸರು ಹೊಡೆಯುವ ವ್ಯಕ್ತಿ, ಅವರ ಅಮ್ಮ, ಅಪ್ಪ ಸಹೋದರ, ಸಹೋದರಿ, ಮಗ ಅಥವಾ ಆಪ್ತರಾಗಿದ್ದರೆ ಹೀಗೆ ಹೊಡೆಯುತ್ತಿದ್ದಾರಾ ? ಇಷ್ಟೇ ಅಮಾನವೀಯವಾಗಿ ವರ್ತಿಸುತ್ತಿದ್ದರಾ ? ಅನ್ನೋದು. ಒಂದುಂತು ಸತ್ಯ ಬಹುಮುಖ್ಯವಾಗಿ ಪೊಲೀಸರಿಗೆ ಸಂಬಂಧಗಳ ಬಗ್ಗೆ ಎಲ್ಲರಿಗಿಂತಲೂ ಹೆಚ್ಚಿನ ಅರಿವಿದೆ. ಭಾಂದವ್ಯಗಳ ಬಗ್ಗೆ ಕಾಳಜಿಯಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ಕರ್ತವ್ಯದ ಬಗ್ಗೆ ಭಯವಿದೆ. ಬಹುತೇಕ ಎಲ್ಲರೂ ಪೊಲೀಸರು ಹೊಡೆಯುವುದನ್ನು ಮಾತ್ರ ನೋಡಿದ್ದೀರಾ ! ಆದರೆ ನಾನು ಹೊಡೆದ ನಂತರದ ಬೆಳವಣಿಗೆಗಳನ್ನು ನೋಡಿದ್ದೇನೆ. ಛೇ ಹೊಡೆದುಬಿಟ್ಟೆವಲ್ಲ ಅಂತಾ ಮರುಗುವ ಖಾಕಿಯನ್ನು ಕಂಡಿದ್ದೇನೆ. ಹೊಡೆದ ದೃಶ್ಯಗಳನ್ನು ಆಧಾರಿಸಿ ಮೇಲಧಿಕಾರಿಯಿಂದ ಛೀಮಾರಿ ಹಾಕಿಸಿಕೊಂಡಿದ್ದನ್ನು ನೋಡಿದ್ದೇನೆ. ಅಮಾನತು ಆದವರ ಜೊತೆ ಕುಳಿತು ಸಮಾಧಾನದ ಮಾತನಾಡಿದ್ದೇನೆ. ಆದ್ರೆ ಪ್ರಶ್ನೆ ಅದಲ್ಲ ಪೊಲೀಸರು ಹೊಡೆಯುವ ಹಂತಕ್ಕೆ ಏಕೆ ತಲುಪುತ್ತಾರೇ ಅನ್ನೋದು ?
ಪೊಲೀಸರು ಅಸಹಾಯಕರು
ಪೊಲೀಸರು ಅಸಹಾಯಕರು ಅನ್ನೋದನ್ನು ಖಂಡಿತಾ ಎಷ್ಟೋ ಜನ ಒಪ್ಪುವುದಿಲ್ಲ. ಆದ್ರೆ ಅಸಲಿಗೆ ಪೊಲೀಸರು ಅಸಹಾಯಕರು. ರಸ್ತೆಯಲ್ಲಿ ನಿಂತ ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಹಿಡಿದು, ಬುಲೆಟ್ ಬೈಕ್‌ನಲ್ಲಿ ಸುತ್ತುವ ಎಸ್ ಐ, ಜೀಪ್‌ನಲ್ಲಿ ಕೂತು ಖದರ್ ತೋರುವ ಇನ್ಸಪೆಕ್ಟರ್ ಎಸಿಪಿ, ಎಸಿ ಚೇಂಬರ್‌ನಲ್ಲಿ ಕುಳಿತ ಡಿವೈಎಸ್‌ಪಿ, ಡಿಸಿಪಿ, ಕಮಿಷನರ್, ಎಸ್ ಪಿ, ಐಜಿ, ಡಿಜಿ ಎಲ್ಲರೂ ಒಂದಲ್ಲ ಒಂದು ರೀತಿಯ ಅಸಹಾಯಕರು ಹಾಗೂ ಪರಿಸ್ಥಿತಿಯ ಕೈಗೊಂಬೆವಳು ಅನ್ನೋದು ಕಟು ಸತ್ಯ ಅನ್ನೋದಕ್ಕಿಂತ ವಾಸ್ತವ. ಹೌದು ರಸ್ತೆಯಲ್ಲಿ ನಿಂತು ಮನಸೋಇಚ್ಛೇ ಲಾಠಿ ಬೀಸುವ ಕಾನ್ಸ್‌ಟೇಬಲ್ ಹಿಂದೆ ಆತನ ಇಚ್ಚೇ, ಅಧಿಕಾರ, ವಿವೇಚನೆ ಯಾವುದು ಇರುವುದಿಲ್ಲ. ಅಲ್ಲಿರುವುದು ತನ್ನ ಮೇಲಧಿಕಾರಿಯ ಆರ್ಡರ್ ಅಷ್ಟೇ. ಮುಂದಿರುವವರು ಯಾರೇ ಆಗಿರಲಿ ಆ ಕ್ಷಣಕ್ಕೆ ಆತನಲ್ಲಿ ತನ್ನ ಹಿರಿಯ ಅಧಿಕಾರಿಯ ಆದೇಶ ಪಾಲಿಸುವ ಭೂತವಷ್ಟೇ ಸವಾರಿ ಮಾಡುತ್ತಿರುತ್ತದೆ. ಇದರ ಜಾಡು ಹಿಡಿದು ಹೊರಟರೆ ಕೊನೆಗೆ ಅದು ಬಂದು ನಿಲ್ಲುವುದು ನಮ್ಮಲ್ಲಿನ ವ್ಯವಸ್ಥೆ ಹಾಗೂ ನಮ್ಮ ಬಳಿಯೇ. ಹೌದು ನಮ್ಮ ಸದ್ಯದ ವ್ಯವಸ್ಥೆ ಹಾಗೂ ಕೆಲವು ನಮ್ಮ ನಿಮ್ಮಂತಹ ಜನರು ಈ ರೀತಿಯ ಪರಿಸ್ಥಿತಿ ಉದ್ಬವವಾಗಲು ಕಾರಣರಾಗಿರುತ್ತಾರೆ. ಹೌದು ಸರ್ಕಾರ ಹುಚ್ಚಾಪಟ್ಟೆ ಆದೇಶವನ್ನೇನೋ ಮಾಡಿಬಿಡುತ್ತದೆ. ಆ ಆದೇಶ ಜಾರಿಗೆ ತರಬೇಕಾಗಿರುವ ಜವಾಬ್ದಾರಿ ಸಾಕಷ್ಟು ಜನರ ಮೇಲಿರುತ್ತದೆ. ಆದ್ರೆ ಹೀಗೆ ಆದೇಶ ಅನುಷ್ಠಾನ ಮಾಡಬೇಕಾದವರೆಲ್ಲರೂ ತಮ್ಮ ಜವಾಬ್ದಾರಿಯಿಂದ ನುಣಚಿಕೊಂಡು ಬಿಡುತ್ತಾರೆ. ಕೊನೆಗೆ ಆ ಟಾಸ್ಕ್ ತಲುಪುವುದು ಪೊಲೀಸರ ಅಂಗಳಕ್ಕೆ. ನಿಮಗೆ ಗೊತ್ತಿರಲಿ ಪೊಲೀಸರ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತೆ ಇರುತ್ತದೆ. ಒಂದು ಕಡೆ ಅರ್ಥವಿಲ್ಲದ ಅವೈಜ್ಞಾನಿಕವಾದ ಆದೇಶ. ಮತ್ತೊಂದು ಕಡೆ ಅದು ಅರ್ಥವಿಲ್ಲದ್ದು ಅವೈಜ್ಞಾನಿಕ ಅಂತಾ ಗೊತ್ತಿದ್ದರು ಪಾಲಿಸಲೇಬೇಕಾದ ಅನಿವಾರ್ಯತೆ. ಇಂತಹ ಸಂದಿಗ್ಧತೆಯಲ್ಲಿ ಯಾರೇ ಇರಲಿ, ಅವರ ಮನಸ್ಥಿತಿ ಹೇಗಿರುತ್ತೇ ಅನ್ನೋದನ್ನು ಹೇಳುವ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ.
ಲಾಠಿ ಏಟು………
ಲಾಠಿ ಏಟು ಬಿದ್ದಿರುವುದು ಈಗ ಬಹು ಮುಖ್ಯ ಚರ್ಚೆಯ ವಿಷಯ. ಇಲ್ಲಿ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಮೊದಲನೆಯದು ಲಾಠಿ ಬೀಸಿದ ಪರಿಸ್ಥಿತಿ. ಕೊಂಚ ಯೋಚಿಸಿ ಒಂದಲ್ಲ, ಎರಡಲ್ಲ ಬರೋಬ್ಬರಿ 14 ದಿನ ಲಾಠಿ ಎತ್ತದೆ ಜನರಿಗೆ ಹಗಲು ರಾತ್ರಿ ಎನ್ನದೇ, ತಿಳಿ ಹೇಳುತ್ತಾ ಜಾಗೃತಿ ಮೂಡಿಸುತ್ತಾ, ಗದರಿಸುತ್ತಾ, ಮನವಿ ಮಾಡುತ್ತಾ ಇದ್ದ ಖಾಕಿ ಪಡೆ ಏಕಾ ಏಕಿ ಲಾಠಿ ಬೀಸಿದರು ಎಂದರೆ ಅದಕ್ಕೊಂದು ಪ್ರಮುಖ ಕಾರಣ ಇದ್ದೇ ಇರುತ್ತದೆ. ಅದು ಒಂದೋ ಪರಿಸ್ಥಿತಿ ಕೈ ಮೀರಿದೆ ಅಂತಾ, ಮತ್ತೊಂದು ಪರಿಸ್ಥಿತಿ ನಿಭಾಯಿಸಲು ಲಾಠಿಯೇ ಅಂತಿಮ ಅನ್ನೋ ಹಂತ . ಇನ್ನು ಪೊಲೀಸರು ಸುಖಾ ಸುಮ್ಮನೆ ಎಲ್ಲರ ಮೇಲೂ ಲಾಠಿ ಬೀಸಿಲ್ಲ. ಆಯ್ಕೆ ಮಾಡಿಕೊಂಡು ಲಾಠಿ ಬೀಸಿದ್ದಾರೆ. ಅದರಲ್ಲಿ ಒಂದೆರೆಡು ಆಯ್ಕೆ ತಪ್ಪಾಗಿರಬಹುದು. ಅದನ್ನು ನಾನು ಸಹಾ ಒಪ್ಪುತ್ತೇನೆ. ಆದ್ರೆ ಪೊಲೀಸರು ಲಾಠಿ ಬೀಸಿರುವುದು ರಸ್ತೆಗಿಳಿದ 0.01 ಪರ್ಸೆಂಟ್ ಜನರ ವಿರುದ್ದ ಮಾತ್ರ. ಹೌದು ಸರಿಯಾದ ಕಾರಣ ನೀಡಿದ 1000 ಜನರಿಗೆ ಯಾವುದೇ ತೊಂದರೆ ಕೊಡದೆ ಕಳುಹಿಸಲಾಗಿದೆ. ಅದರಲ್ಲಿ ಒಬ್ಬರೋ ಇಬ್ಬರೋ ತಲೆಹರಟೆ ಮಾಡಿ ಲಾಠಿ ಏಟು ತಿಂದಿದ್ದಾರೆ. ಇದರ ಜೊತೆಗೆ ಪೊಲೀಸರು ಮೃತ ಸೋಂಕಿತನ ಶವವನ್ನು ಯಾರು ಮುಟ್ಟದಾಗ ಹೆಗಲು ಕೊಟ್ಟಿದ್ದಾರೆ. ಲಾಕ್‌ಡೌನ್‌ನಿಂದ ಕಂಗಾಲಗಿ ಬೀದಿಯಲ್ಲಿ ಮಲಗಿದ್ದವರಿಗೆ ಊಟ ನೀಡಿದ್ದಾರೆ. ಊರಿಗೆ ಹೋಗಲು ಹಣವಿಲ್ಲದವರಿಗೆ ಹಣ ಕೊಟ್ಟು ಕಳುಹಿಸಿದ್ದಾರೆ. ಅಷ್ಟೇ ಏಕೆ ಅನಾರೋಗ್ಯ ಪೀಡಿತರಿಗೆ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದ್ಯಾವುದು ವೈರಲ್ಲೂ ಆಗಲಿಲ್ಲ. ಸುದ್ದಿಯೂ ಆಗಲಿಲ್ಲ.
ಲಾಟಿ ಏಟು ಪರ ವಿರೋಧ
ಎಸ್ ಪೊಲೀಸರು ಲಾಠಿ ಬೀಸಿದ ಪರಿ ಹಾಗೂ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಜೋರಾಗಿ ನಡೆದಿದೆ. ಪೊಲೀಸರ ಪರ ನಿಂತಿರುವವರು ಹೆಣ ಎತ್ತೋದನ್ನು ತಪ್ಪಿಸಲು ಲಾಠಿ ಎತ್ತಿದ್ದೀರಿ ಒಳ್ಳೆಯದು ಅಂತಾ ಪೊಲೀಸರಿಗೆ ಬೆಂಬಲವಾಗಿ ನಿಂತಿದ್ದಾರೆ. ಮತ್ತೊಂದು ಕಡೆ ಪೊಲೀಸರ ಲಾಠಿ ವಿರೋಧ ಇರುವವರು ಇದು ಕಾನೂನುಬಾಹಿರ ಅಮಾನವೀಯ ಪೊಲೀಸರು ಕಟುಕರು ಅವರ ವಿರುದ್ದ ಕಾನೂನು ಹೋರಾಟ ಮಾಡೋಣ ಅಂತಾ ಟೊಂಕ ಕಟ್ಟಿ ನಿಂತಿದ್ದಾರೆ. ಇದೆಲ್ಲಾ ಏನೇ ಇರಲಿ ಪೊಲೀಸರು ಮಾಡಿದ್ದು ಸರಿ ತಪ್ಪು ಅನ್ನೋದಕ್ಕಿಂತ ನಾವೆಲ್ಲರೂ ಪರಿಸ್ಥಿತಿಯ ಬಗ್ಗೆ ಒಂದಷ್ಟು ಎಚ್ಚರದಿಂದಿರೋಣ. ಬೇರೆಯವರ ಬಗ್ಗೆ ದೂರುವ ಬದಲು ಈ ಪರಿಸ್ಥಿತಿ ನಿಭಾಯಿಸುವುದಕ್ಕೆ ಸಹಕಾರ ಕೊಡೋಣ ನಾಡನ್ನು ಕೊರೊನಾ ಮುಕ್ತವಾಗಿಸೋಣ.
ಸರ್ವೇ ಜನಾಃ ಸುಖಿನೋ ಭವಂತು
– ರಾಮ್, ಮೈಸೂರು