ಒಂದೇ ದಿನ ಎರಡು ರೀತಿಯ ತನಿಖಾ ರೀಪೋರ್ಟ್ ಬರೆದ ಮೈಸೂರು ಪ್ರಾದೇಶಿಕ ಆಯುಕ್ತ
1 min readಮೈಸೂರು: ಮೈಸೂರು ಪ್ರಾದೇಶಿಕ ಆಯುಕ್ತರು ಒಂದೇ ದಿನದಲ್ಲಿ ಎರಡು ರೀತಿಯ ತನಿಖಾ ರೀಪೋರ್ಟ್ ಬರೆದಿದ್ದು, ಇದೀಗ ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಬಗ್ಗೆಯೆ ಅನುಮಾನ ಸೃಷ್ಟಿಯಾಗಿದೆ!?
ಮೈಸೂರು ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರು ಮೈಸೂರು ಡಿಸಿ ಅಧಿಕೃತ ಸರ್ಕಾರಿ ನಿವಾಸದಲ್ಲಿ ಈಜುಕೊಳ ನಿರ್ಮಾಣದ ತನಿಖೆ ವಿಚಾರದಲ್ಲಿ ಒಂದೇ ದಿನದಲ್ಲಿ 2 ತನಿಖಾ ವರದಿ ನೀಡಿದ್ದಾರೆ. ಮೊದಲ ವರದಿಯಲ್ಲಿ ಒಟ್ಟು ಆರು ನ್ಯೂನತೆ ನಮೂದು ಮಾಡಿದ್ದಾರೆ. ಆದರೆ ಎರಡನೇ ವರದಿಯಲ್ಲಿ ಕೇವಲ ಎರಡೆ ನ್ಯೂನತೆ ನಮೂದಿಸಿದ್ದಾರೆ.
ಮೊದಲ ವರದಿಯಲ್ಲಿ ಪ್ರಮುಖವಾಗಿ ಈಜುಕೊಳದ ಬಗ್ಗೆ ಪ್ರಸ್ತಾಪವಾಗಿದೆ. ಈಜುಕೊಳದ ನಿರ್ಮಾಣಕ್ಕೆ ತಯಾರಾಗಿದ್ದ 32 ಲಕ್ಷ ರೂ ಅಂದಾಜುಪಟ್ಟಿ. ಇದಕ್ಕೆ ಲೋಕೋಪಯೋಗಿ ಇಲಾಖೆ ಅನುಮೋದನೆ ಪಡೆದಿಲ್ಲ, ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳಿಲ್ಲ ಎಂದು ನಮೂದಾಗಿತ್ತು. ಎರಡನೇ ತನಿಖಾ ವರದಿಯಲ್ಲಿ ಪ್ರಮುಖವಾದ ಈ ಎರಡು ಅಂಶವನ್ನ ಪ್ರಾದೇಶಿಕ ಆಯುಕ್ತರು ದಿಢೀರ್ ಕೈ ಬಿಟ್ಟಿದ್ದಾರೆ.
ಪ್ರಾದೇಶಿಕ ಆಯುಕ್ತರು ಕೊಟ್ಟ ಮೊದಲ ವರದಿಯಲ್ಲಿ. ಈಜುಕೊಳ ನಿರ್ಮಾಣದಲ್ಲಿ ಆಗಿರೋ ಆರ್ಥಿಕ ವಿಚಾರ ಗೌಪ್ಯವಾಗಿರೋದೆ ಪ್ರಮುಖ ಲೋಪ ಎಂದು ನಮೂದಾಗಿತ್ತು. ಆದರೆ, ಇದೇ ಅಂಶವನ್ನೇ ಕೈಬಿಟ್ಟು ಪ್ರಾದೇಶಿಕ ಆಯುಕ್ತರು ದಿಢೀರ್ ಎರಡನೇ ಎಡಿಟೇಡ್ ವರದಿ ಕೊಟ್ಟಿದ್ದಾರೆ. ಇದೀಗ ಸರಕಾರವನ್ನೇ ಯಾಮಾರಿಸಿದ್ರಾ ಪ್ರಾದೇಶಿಕ ಆಯುಕ್ತರು ಎಂಬ ಪ್ರಶ್ನೆ ಮೂಡಿದೆ.