ಮೈಸೂರಿನ ಕನ್ನಡ ಪ್ರೇಮಿಯ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ
1 min read
ಮೈಸೂರು: 11 ವರ್ಷಗಳಿಂದ ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದ ರಾಜೀವ್ ನಗರದ ಸೈಯದ್ ಇಸಾಕ್ (67) ಎಂಬುವವರ ಗ್ರಂಥಾಲಯಕ್ಕೆ ಕಿಡಿಗೇಡಿಗಳು ಶುಕ್ರವಾರ ನಸುಕಿನಲ್ಲಿ ಬೆಂಕಿ ಹಚ್ಚಿದ್ದು, ಸುಮಾರು 11 ಸಾವಿರ ಪುಸ್ತಕಗಳು ಭಸ್ಮವಾಗಿವೆ.
3 ಸಾವಿರ ಕನ್ನಡ ಪುಸ್ತಕಗಳು, ಭಗವದ್ಗೀತೆಯ 3 ಸಾವಿರ ಪ್ರತಿಗಳು, ಕುರ್‌ಆನ್‌ನ 3 ಸಾವಿರ ಪ್ರತಿಗಳು, 1 ಸಾವಿರ ಉರ್ದು ಪುಸ್ತಕಗಳು ಹಾಗೂ ಬೈಬಲ್‌ನ 1 ಸಾವಿರ ಕನ್ನಡ ಪ್ರತಿಗಳು ಇದರಲ್ಲಿ ಸೇರಿವೆ.

ನಸುಕಿನ 3.45ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಪಡೆ ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲ ಪುಸ್ತಕಗಳು ಬೆಂಕಿಗಾಹುತಿಯಾಗಿದ್ದವು. ನೂರಕ್ಕೂ ಅಧಿಕ ಮಂದಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ.
ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಸಯ್ಯದ್ ಇಸಾಕ್ 2011ರಲ್ಲಿ ಗ್ರಂಥಾಲಯ ಸ್ಥಾಪಿಸಿದ್ದರು. ತನ್ನ ಉಳಿತಾಯದ ಹಣದಲ್ಲಿ ಗುಡಿಸಲಿನಲ್ಲಿ ಗ್ರಂಥಾಲಯ ನಿರ್ಮಿಸಿದ್ದರು. ಈ ಕನ್ನಡ ಗ್ರಂಥಾಲಯ ಮೈಸೂರಿನಲ್ಲಿ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕಿಡಿಗೇಡಿಗಳು ಬೆಂಕಿ ಇಟ್ಟು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಗ್ರಂಥಾಲಯ ಸಂಪೂರ್ಣ ಸುಟ್ಟು ಕರಕಲಾಗಿದೆ.
ಚರಂಡಿ ಸ್ವಚ್ಚತೆ, ಮ್ಯಾನ್‌ಹೋಲ್ ಶುದ್ದಿಕಾರ್ಯ ಮಾಡುವ ಸಯ್ಯದ್ ಇಸಾಕ್ ತನಗೆ ಅಕ್ಷರ ಜ್ಞಾನ ಇಲ್ಲದಿದ್ದರೆ ಇತರರಿಗೆ ಅಕ್ಷರ ಜ್ಞಾನರ್ಜಗೆ ಮುಂದಾಗಿದ್ದರು. ಸಯ್ಯದ್ ಇಸಾಕ್ ಅವರು ಘಟನೆಯಿಂದ ತೀವ್ರ ಬೇಸರಕ್ಕಿಡಾಗಿದ್ದಾರೆ.