ನಕಲಿ ದಾಖಲಾತಿ ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಕೋಟ್ಯಾಂತರ ರೂ ಸಾಲ ಪಡೆದು ವಂಚನೆ: 15 ಆರೋಪಿಗಳ ಬಂಧನ
1 min readಮೈಸೂರು: “ನಕಲಿ ವಾಹನ ದಾಖಲಾತಿ ಸೃಷ್ಟಿಸಿ, ಹಣಕಾಸು ಸಂಸ್ಥೆಗಳಿಂದ ಕೋಟ್ಯಾಂತರ ರೂಪಾಯಿ ವಾಹನ ಸಾಲ ಪಡೆದು ವಂಚಿಸಿರುವ ಒಟ್ಟು 15 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. 07 ಲಾರಿಗಳು, 02 ಕಾರು, ಒಂದು ಬೈಕ್, 02 ಲ್ಯಾಪ್ ಟಾಪ್ ಮತ್ತು ಪ್ರಮುಖ ದಾಖಲಾತಿಗಳನ್ನ ವಶಪಡಿಸಿಕೊಂಡಿದ್ದಾರೆ.
ದಿನಾಂಕ: 20.03.2021ರಂದು ಚೋಳಮಂಡಲಂ ಫೈನಾನ್ಸ್ನ ಏರಿಯಾ ಮ್ಯಾನೇಜರ್ ವಿಜಯ್ರವರು ದೇವರಾಜ ಪೊಲೀಸ್ ಠಾಣೆಗೆ ಹಾಜರಾಗಿ, 2019ನೇ ಸಾಲಿನಿಂದ 2020ನೇ ಸಾಲಿನವರೆಗೆ ಆರೋಪಿಗಳು 10 ಲಾರಿಗಳಿಗೆ ಒಟ್ಟು 1,35,53,000/- ರೂ ಸಾರಿಗೆ ವಾಹನ ಸಾಲವನ್ನು ಪಡೆದುಕೊಂಡಿದ್ದು, ಕೆಲವು ತಿಂಗಳು ಮಾಸಿಕ ಕಂತುಗಳನ್ನು ಪಾವತಿಸಿ, ನಂತರದಲ್ಲಿ ಮಾಸಿಕ ಕಂತನ್ನು ಪಾವತಿ ಮಾಡದೆ ಇದ್ದ ಕಾರಣದಿಂದ, ಕಂಪನಿಯ ಸಿಬ್ಬಂದಿಗಳು ಲಾರಿಗಳನ್ನು ಸೀಜ್ó ಮಾಡಲು ಹೋದಾಗ ಲಾರಿಗಳನ್ನು ಹಾಜರುಪಡಿಸದೆ, ಮಾಸಿಕ ಕಂತನ್ನು ಕಟ್ಟದೇ ಸತಾಯಿಸುತ್ತಾ ಇದ್ದರು.
ಕೇಳಲು ಹೋದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಬೆದರಿಕೆ ಹಾಕಿದ್ದು, ಈ ಬಗ್ಗೆ ಹೆಚ್ಚಿನ ವಿಚಾರ ಮಾಡಿದಾಗ ಆರೋಪಿಗಳು ನಕಲಿ ದಾಖಲಾತಿಗಳನ್ನು ಸೃಷ್ಠಿಸಿ, ಅವುಗಳನ್ನೇ ಅಸಲಿ ದಾಖಲಾತಿಗಳು ಎಂದು ನಂಬಿಸಿ, ಫೈನಾನ್ಸ್ನಿಂದ ಲೋನ್ ಪಡೆದುಕೊಂಡು, ನಂತರ ಲಾರಿಗಳಿಗೆ ಇಂಜಿನ್ ಮತ್ತು ಚಾಸಿಸ್ ನಂಬರ್ಗಳನ್ನು ಪಂಚಿಂಗ್ ಮಾಡಿಸಿ, ಬೇರೆಯವರಿಗೆ ಮಾರಾಟ ಮಾಡಿರುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿರುತ್ತದೆ.
ತನಿಖಾ ಕಾಲದಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಲಾಗಿ, ಆರೋಪಿಗಳು ನೈಜ ಲಾರಿಗಳು ಇಲ್ಲದೆಯೇ ಅಶೋಕ ಲೈಲ್ಯಾಂಡ್ ಕಂಪನಿಯ ಲಾರಿಗಳಿಗೆ ಆಂಧ್ರಪ್ರದೇಶದ ರಾಜ್ಯದ ವಿವಿಧ ಆರ್ಟಿಓ ಕಛೇರಿಗಳಲ್ಲಿ ನೋಂದಣಿಯಾಗಿರುವಂತೆ ನಕಲಿ ಆರ್ಸಿ ಶೀಟ್, ವರ್ಗಾವಣೆ ದಾಖಲಾತಿಗಳನ್ನು ಸೃಷ್ಠಿಸಿ, ದಾಖಲಾತಿಗಳನ್ನು ಕರ್ನಾಟಕ ರಾಜ್ಯದ ಹಲವು ಆರ್ಟಿಓ ಕಛೇರಿಗಳಲ್ಲಿ ವರ್ಗಾವಣೆಗಾಗಿ ಮತ್ತು ಮರುನೋಂದಣಿಗಾಗಿ ಸ್ಥಳೀಯವಾದ ನಕಲಿ ವಿಳಾಸ ದಾಖಲಾತಿಗಳನ್ನು ಸಲ್ಲಿಸಿ, ಲಾರಿಗಳನ್ನು ಪರಿಶೀಲನೆಗೆ ಹಾಜರುಪಡಿಸದೇ ವರ್ಗಾವಣೆ ಮಾಡಿಸಿ, ಅಸಲು ಆರ್ಸಿ ಕಾರ್ಡ್ಗಳನ್ನು ಪಡೆದುಕೊಂಡು, ಸದರಿ ಲಾರಿಯ ಕಾರ್ಡ್ಗಳನ್ನು ಇತರೆ ಆರ್ಟಿಓ ಕಛೇರಿಗಳಿಗೆ ಸಿಸಿ ಮಾಡಿಸುತ್ತಿದ್ದು, ಇದೇ ರೀತಿ 2019ನೇ ಸಾಲಿನಿಂದ 2020 ಸಾಲಿನವರೆಗೆ ಸುಮಾರು 200 ಆರ್ಸಿ ಕಾರ್ಡ್ಗಳನ್ನು ಮಾಡಿಸಿರುವ ಬಗ್ಗೆ ಆರೋಪಿಗಳು ವಿಚಾರಣಾ ಕಾಲದಲ್ಲಿ ತಿಳಿಸಿರುತ್ತಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು 15 ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು 07 ಲಾರಿಗಳು, 02 ಕಾರು, ಒಂದು ಬೈಕ್, 02 ಲ್ಯಾಪ್ ಟಾಪ್ ಮತ್ತು ಪ್ರಮುಖ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.ತನಿಖೆ ಮುಂದುವರಿದಿದೆ.
ಈ ಪ್ರಕರಣದ ಸಂಬಂಧ ಆರ್ಟಿಓ ಕಛೇರಿಗಳಿಂದ ದಾಖಲಾತಿ ವಶಕ್ಕೆ ಪಡೆದು, ಆರೋಪಿಗಳು ತಿಳಿಸಿರುವಂತೆ ಆಂಧ್ರಪ್ರದೇಶ ರಾಜ್ಯ ಮೂಲದ ವಿವಿಧ ಆರ್ಟಿಓ ಕಛೇರಿಗಳ ಹೆಸರಿನಲ್ಲಿ ಆರ್ಸಿ ಶೀಟ್ಗಳನ್ನು ಮಾಡಿಸಿರುವ ವಿಚಾರ ಸಂಬಂಧ ಪರಿಶೀಲನೆ ನಡೆಯುತ್ತಿದ್ದು, ತಲೆಮರಿಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರಿಸಲಾಗಿದೆ. ತನಿಖಾ ಕಾಲದಲ್ಲಿ ಆರೋಪಿಗಳು ಚೋಳಮಂಡಲಮ್ ಫೈನಾನ್ಸ್ನಲ್ಲಿ ಮಾತ್ರ ಸಾಲ ಪಡೆದಿರುವುದಲ್ಲದೇ, ಇತರೇ ಫೈನಾನ್ಸ್ಗಳಲ್ಲೂ ಇದೇ ರೀತಿಯಲ್ಲಿ ನಕಲಿ ದಾಖಲಾತಿಗಳನ್ನು ಬಳಸಿ ವಾಹನ ಸಾಲ ಪಡೆದಿರುವುದು ಕಂಡುಬಂದಿದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿರುತ್ತದೆ.
ಈ ಪ್ರಕರಣದ ತನಿಖೆಯನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಐ.ಪಿ.ಎಸ್., ರವರ ಮಾರ್ಗದರ್ಶನಲ್ಲಿ ಡಿಸಿಪಿ ರವರುಗಳಾದ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಶ್ರೀಮತಿ ಗೀತಪ್ರಸನ್ನ ರವರ ಉಸ್ತುವಾರಿಯಲ್ಲಿ ದೇವರಾಜ ವಿಭಾಗದ ಎಸಿಪಿ ರವರಾದ ಶ್ರೀ ಶಶಿಧರ ಎಂ.ಎನ್. ರವರ ನೇತೃತ್ವದಲ್ಲಿ ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್, ಪಿಎಸ್ಐ ಗಳಾದ ರಾಜು, ಶ್ರೀಮತಿ ಲೀಲಾವತಿ, ಅನಿಲ್ಕುಮಾರ್, ಗೌತಮ್, ಮಹೇಂದ್ರ.ಟಿ.ಎಸ್, ಮದನ್, ಸಿಬ್ಬಂದಿಗಳಾದ ಸೋಮಶೆಟ್ಟಿ, ಸುರೇಶ್, ನಂದೀಶ್, ಚಂದ್ರು, ಪ್ರವೀಣ್ ಕುಮಾರ್, ನಾಗರಾಜು, ಮಂಚನಾಯಕ, ವೇಣುಗೋಪಾಲ್, ವೀರೇಶ್ ಬಾಗೇವಾಡಿ, ಪ್ರದೀಪ್, ಶ್ರೀಮತಿ ಶೀಲಾ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಕುಮಾರ್ ರವರುಗಳಿರುವ ತಂಡ ನಮ್ಮ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಭೇಟಿ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.