ಸರ್ಕಾರ ಬದುಕಿದ್ಯಾ ? ಅಥವಾ ಸತ್ತೋಗಿದ್ಯ ? ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ
1 min readಮೈಸೂರು: ಜನರ ನಡುವಿನ ಭಾವನಾತ್ಮಕ ಸಂಕೇತ ಅಂತ ಇಂದು ಉಳಿದಿದ್ದರೆ ಅದು ಕನ್ನಂಬಾಡಿ. ರಾಜಪ್ರಭುತ್ವದ, ಪ್ರಜೆಗಳ ನಡುವಿನ ಸಂಕೇತ ಕನ್ನಂಬಾಡಿ. ಕನ್ನಂಬಾಡಿ ಅಂತರರಾಷ್ಟ್ರೀಯ ಪ್ರವಾಸಿ ತಾಣ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕನ್ನಂಬಾಡಿ ನಿರ್ಮಾಣವಾಗುವ ವೇಳೆ ಬಹಳಷ್ಟು ತ್ಯಾಗ ನಡೆದಿದೆ. ಸಾಕಷ್ಟು ಗ್ರಾಮಗಳು ಮುಳುಗಡೆ ಆಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಏನೇನೋ ಮಾತನಾಡುತ್ತಿದ್ದಾರೆ. ಹೀಗಾಗಿಯೇ ಕನ್ನಂಬಾಡಿ ಬಗ್ಗೆ ಮಾತನಾಡಬೇಕು ಎನಿಸಿದೆ. ಕನ್ನಂಬಾಡಿ ನಮ್ಮ ಅಭಿಮಾನದ ಸಂಕೇತ. ರಾಜಮನೆತನದ ಹೆಣ್ಣುಮಕ್ಕಳು ತಮ್ಮ ಒಡವೆಗಳನ್ನು ಮಾರಿ ಈ ಅಣೆಕಟ್ಟೆಗೆ ದುಡ್ಡು ಕೊಟ್ಟಿದ್ರು. ಸುಮಾರು 70 ಲಕ್ಷ ಹಣವನ್ನು ರಾಜಮನೆತನದ ಹೆಣ್ಣುಮಕ್ಕಳು ಬೊಂಬಾಯಿಗೆ ಹೋಗಿ ಮಾರಿ ತಂದುಕೊಟ್ಟರು. ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದಲೂ ಡ್ಯಾಂ ನಿರ್ಮಾಣಕ್ಕೆ ವಸ್ತುಗಳು ಬಂದಿವೆ. ಬೇರೆ ಬೇರೆ ದೇಶದ ಇಂಜಿನಿಯರ್ಸ್, ಸರ್. ಎಂ.ವಿಶ್ವೇರಯ್ಯನವರ ಬುದ್ಧಿಶಕ್ತಿ ಇಲ್ಲಿ ಬಳಕೆಯಾಗಿದೆ. ಕನ್ನಂಬಾಡಿ ಬಿರುಕು ಬಿಟ್ಟಿದೆ ಅನ್ನೋದು ಆತಂಕ ತಂದಿದೆ ಎಂದು ತಿಳಿಸಿದರು.
ರಾಜ ಪ್ರಭುತ್ವದಲ್ಲಿ ನಿರ್ಮಾಣ ಆಗಿದ್ದಕ್ಕೆ ಬಿರುಕು ಬಿಟ್ಟಿಲ್ಲ. ಬಹುಶಃ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಮಾಣವಾಗಿದ್ರೆ ಕಮಿಷನ್, ಕಿಕ್ ಬ್ಯಾಕ್ ತಗೊಂಡು ನಿರ್ಮಾಣ ಮಾಡುತ್ತಿದ್ದರು. ಈವಾಗ ನಿರ್ಮಾಣವಾಗಿದ್ರೆ ಬಿರುಕುಬಿಡುತ್ತಿತ್ತೇನೋ. ಸಂಸದರು ಬಿರುಕು ಬಿಟ್ಟಿದೆ ಅಂತಾರೆ, ಮಾಜಿ ಸಿಎಂ ಕುಮಾರಸ್ವಾಮಿ ಬಿರುಕು ಬಿಟ್ಟಿಲ್ಲ ಅಂತಾರೆ. ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸೈಲೆಂಟ್ ಆಗಿದ್ದಾರೆ. ಇದಕ್ಕೆ ಯಾಕೆ ಬೇಕು ಉಸ್ತುವಾರಿ ಮಂತ್ರಿ ಎಂದು ಪ್ರಶ್ನಿಸಿದರು.
ಇಷ್ಟೊತ್ತಿಗಾಗಲೇ ಮುಖ್ಯಮಂತ್ರಿಗಳು, ಟೆಕ್ನಿಕಲ್ ಟೀಮ್, ಗಣಿ ಟೀಮ್, ನೀರಾವರಿ ಇಲಾಖೆ ಟೀಮ್ ಬಂದು ಬೀಡು ಬಿಡಬೇಕಾಗಿತ್ತು. ಜನರು ಆತಂಕದಲ್ಲಿ ಇದ್ದಾರೆ. ಸರ್ಕಾರ ಸತ್ತೋಗಿದ್ಯ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಜೀವಂತವಾಗಿದ್ಯೋ ಸತ್ತಿದ್ಯೋ. ಮುಖ್ಯಮಂತ್ರಿ ಕೈಯಲ್ಲಿ ಇಲಾಖೆ ಬಂದು ನಾಲ್ಕೈದು ತಿಂಗಳಾಯ್ತು. ಸಿಎಂ ಕೈಯಲ್ಲಿ ಬಂದ ಇಲಾಖೆಗಳು ಸತ್ತುಹೋಗ್ತವೆ. ಜವಾಬ್ದಾರಿಯುವ ಜನ ನಾಯಕರು ಜನರ ಹಿತವನ್ನು ಮರೆತು ಬೀದಿಗೆ ಬಂದವ್ರಿಗೆ ಯಾರು ಬುದ್ದಿ ಹೇಳ್ತಾರೆ. ಕೆ.ಆರ್.ಎಸ್ ನ್ನು ರಾಜಕೀಯಕ್ಕೆ ತಂದಿದ್ದಾರೆ. ಅಕ್ರಮ ಗಣಿಗಾರಿಕೆ ಇದ್ರೆ ಹೇಳ್ರಿ ಸರ್ಕಾರಕ್ಕೆ. ತಕ್ಷಣವೇ ಕನ್ನಂಬಾಡಿ ವಿಚಾರದಲ್ಲಿ ಮೀಟಿಂಗ್ ಮಾಡಿ. ಅಲ್ಲಿ ಏನ್ ಆಗಿದೆ ಅನ್ನೋದನ್ನು ಜನ್ರಿಗೆ ಹೇಳಿ ಆತಂಕ ನಿವಾರಣೆ ಮಾಡಿ ಎಂದು ಆಗ್ರಹಿಸಿದರು.