ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಪತ್ರ ಬರೆದ ಸಚಿವ ಎಸ್ ಟಿ ಸೋಮಶೇಖರ್!
1 min readಮೈಸೂರು: ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಇಂದು ನಮಗೆಲ್ಲ ತಿಳಿದಿರುವಂತೆ ಕೋವಿಡ್-19ರ ಸಂಕಷ್ಟದ ಕಾಲದಲ್ಲಿ ನಾವಿದ್ದೇವೆ. ಸೋಂಕು ಪ್ರಕರಣಗಳು ದಿನೇ ದಿನೆ ಹೆಚ್ಚಳಗೊಳ್ಳುತ್ತಿವೆ. ಸೋಂಕಿನ ನಿಯಂತ್ರಣಕ್ಕೆ ಸರ್ಕಾರ, ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳ ಸೇವೆ ಗಣನೀಯವಾಗಿದೆ. ಇದೇ ಸಂದರ್ಭದಲ್ಲಿ ನಮಗೆ ಈಗ ಪ್ರತಿಯೊಬ್ಬರ ಜೀವವೂ ಅತ್ಯಮೂಲ್ಯ. ಎಲ್ಲರನ್ನೂ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ನಾವು-ನೀವೆಲ್ಲರೂ ಈಗಾಗಲೇ ನಿರತರಾಗಿದ್ದೇವೆ ಸಹ. ಆದರೂ, ಕೆಲವೊಂದು ಹೊಸ ವ್ಯವಸ್ಥೆಗಳಿಗೆ ಹಾಗೂ ನೀತಿ-ನಿಯಮಗಳನ್ನು ನಾವು ಬಹುಬೇಗ ಅಳವಡಿಸಿಕೊಂಡು ಹೋಗಬೇಕಿರುವುದು ಮುಖ್ಯವಾಗುತ್ತದೆ. ಈ ಮೂಲಕ ತ್ವರಿತ ಸಾರ್ವಜನಿಕ ಸೇವೆ ಮಾಡಲು ಸಾಧ್ಯವಿದೆ.
ಕೋವಿಡ್ 19ರ ತೀವ್ರ ಸೋಂಕಿತರಿಗೆ ರೆಮಿಡಿಸಿವರ್ ಇಂಜೆಕ್ಷನ್ ಬಹು ಉಪಕಾರಿ ಎಂಬುದು ಈಗಾಗಲೇ ಸಾಬೀತಾಗಿದೆ. ಆದರೆ, ಇವುಗಳ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರದ ಔಷಧ ನಿಯಂತ್ರಣ ಇಲಾಖೆಯು ಕೈಗೊಂಡಿದ್ದು, ಖಾಸಗಿ ಆಸ್ಪತ್ರೆಗಳು ತಮಗೆ ಬೇಡಿಕೆ ಇರುವ ರೆಮಿಡಿಸಿವರ್ ಇಂಜೆಕ್ಷನ್ ಬಗ್ಗೆ ಕೆ.ಪಿ.ಎಂ.ಇ ವೆಬ್‌ಸೈಟ್ ಆದ kpme.kar.gov.in ಮುಖಾಂತರ ಇಂಡೆಂಟ್ ಸಲ್ಲಿಸಲು ಕೋರಿದೆ. ಈಗಾಗಲೇ ಹಲವು ಆಸ್ಪತ್ರೆಗಳು ವೆಬ್‌ಸೈಟ್ ಮೂಲಕ ಇಂಡೆಂಟ್ ಸಲ್ಲಿಸಿದ್ದರೂ, ಇನ್ನೂ ಹಲವು ಖಾಸಗಿ ಆಸ್ಪತ್ರೆಗಳು ಸ್ಪಂದಿಸುತ್ತಿಲ್ಲ ಎಂಬ ಅಂಶಗಳು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನನ್ನದೊಂದು ಮನವಿ ಏನೆಂದರೆ, ಕೆ.ಪಿ.ಎಂ.ಇ ವೆಬ್‌ಸೈಟ್ ಮೂಲಕ ಎಲ್ಲರೂ ರೆಮಿಡಿಸಿವರ್ ಇಂಜೆಕ್ಷನ್‌ಗೆ ಬೇಡಿಕೆ ಸಲ್ಲಿಸಿ, ಜನರ ಪ್ರಾಣವನ್ನು ಕಾಪಾಡಬೇಕಾಗಿ ಈ ಪತ್ರದ ಮೂಲಕ ಕೋರುತ್ತೇನೆ. ಬನ್ನಿ ಸಹಕರಿಸಿ, ಕೊರೋನಾ ಮುಕ್ತ ನಾಡು ಕಟ್ಟಲು ಕೈಜೋಡಿಸಿ…