ಇಬ್ಬರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಸುರೇಶ್ ಕುಮಾರ್
1 min readಚಾಮರಾಜನಗರ: ಚಾಮರಾಜನಗರಕ್ಕೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಜಿಲ್ಲಾಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದ್ದು, ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚಾಮರಾಜನಗರದ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಪಿಪಿಇ ಕಿಟ್ ಧರಿಸಿ ಸೋಂಕಿತರನ್ನು ಭೇಟಿಯಾದರು. ಜಿಲ್ಲಾಸ್ಪತ್ರೆಯ ಸೋಂಕಿತರ ಭೇಟಿಯಾದ ಸಚಿವರು ಸೋಂಕಿತರ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಈಗ ನ್ಯಾಯಾಂಗ ತನಿಖೆಗೆ ಆದೇಶವಾಗಿದೆ. ಈ ಪ್ರಕರಣಕ್ಕೆ ನ್ಯಾಯಮೂರ್ತಿ ನೇಮಕವಾಗಿದ್ದಾರೆ. ಈ ಹಂತದಲ್ಲಿ ಯಾವ ಅಧಿಕಾರಿಯು ಮಾಧ್ಯಮಗಳ ಮೂಲಕ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಬಾರದು ಎಂದು ಇಬ್ಬರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಚಾಮರಾಜನಗರ ಜಿಲ್ಕಾಸ್ಪತ್ರೆಯ ಎಲ್ಲಾ 167 ಬೆಡ್ ಗಳು ಭರ್ತಿಯಾಗಿವೆ. ಇನ್ನೆರಡು ದಿನದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 200 ಬೆಡ್ ಗಳ ವ್ಯವಸ್ಥೆ ಮಾಡಲಾಗುವುದು. ಆಕ್ಸಿಜನ್ ಪೂರೈಕೆಗೆ ಎಲ್ಲಾ ಕ್ರಮ ವಹಿಸಲಾಗಿದೆ. ರಾಜ್ಯದಲ್ಲಿ ಕೈಗಾರಿಕೆಗೆ ಹೋಗುವ ಆಮ್ಲಜನಕವನ್ನು ಆಸ್ಪತ್ರೆಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಬೇಡಿಕೆ ಕಡಿಮೆಯಾಗಿದೆ. ಅಲ್ಲಿಗೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ನ್ನು ಕರ್ನಾಟಕಕ್ಕೆ ಪೂರೈಸುವಂತೆ ಸಿಎಂ ಮಾತುಕತೆ ನಡೆಸುತ್ತಿದ್ದಾರೆ. ಕರ್ನಾಟಕ ಪವರ್ ಕಾರ್ಪೊರೇಷನ್ ನವರು 2000 ಸಿಲಿಂಡರ್ ಕೊಡಲು ಯೋಜನೆ ರೂಪಿಸಿದ್ದಾರೆ ಎಂದು ಮಾಹಿತಿ ನೀಡಿದರು.